ಮುಂಬೈ: ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿದ್ದ ಪಾಕಿಸ್ತಾನ ಮೂಲದ ಅಂಪೈರ್ ಅಸದ್ ರೌಫ್ ಅವರನ್ನು 5 ವರ್ಷಗಳ ಕಾಲ ಬಿಸಿಸಿಐ ನಿಷೇಧಿಸಿದೆ.
ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಸಂಬಂಧ ಶುಕ್ರವಾರ ಮುಂಬೈನಲ್ಲಿ ನಡೆದ ಬಿಸಿಸಿಐ ಶಿಸ್ತು ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸಭೆಯಲ್ಲಿ ಅಂಪೈರ್ ಅಸದ್ ರೌಫ್ ಅವರ ಮೇಲಿನ ಭ್ರಷ್ಟಾಚಾರ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಈ ಹಿಂದೆ 2013ರ ಐಪಿಎಲ್ ಸರಣಿ ವೇಳೆ ಸ್ಪಾಟ್ ಫಿಕ್ಸಿಂಗ್ ಚಟುವಟಿಕೆಗಳಲ್ಲಿ ಅಂಪೈರ್ ಅಸದ್ ರೌಫ್ ಪಾಲ್ಗೊಂಡಿದ್ದಾರೆ ಎಂದು ಆರೋಪಿಸಿ ಮುಂಬೈ ಪೊಲೀಸರು ಅವರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಬಿಸಿಸಿಐನ ಶಿಸ್ತು ಸಮಿತಿ ಕೂಡ ಅಸದ್ ರೌಫ್ ಅವರನ್ನು ನಿರಂತರ ವಿಚಾರಣೆಗೊಳಪಡಿಸಿತ್ತು. ಆದರೆ ಈ ಬಗ್ಗೆ ಅಸದ್ ರೌಫ್ ರಿಂದ ತನಿಖೆಗೆ ಯಾವುದೇ ರೀತಿಯ ಸಹಕಾರ ದೊರೆತಿರಲಿಲ್ಲ. ಈ ಹಿನ್ನಲೆಯಲ್ಲಿ ಇಂದು ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಬಿಸಿಸಿಐ ಆಯೋಜಿಸುವ ಮತ್ತು ಬಿಸಿಸಿಐನ ಪಾತ್ರವಿರುವ ಯಾವುದೇ ಸರಣಿಗಳಲ್ಲಿಯೂ ಪಾಕಿಸ್ತಾನದ ಅಂಪೈರ್ ಅಸದ್ ರೌಫ್ ಅವರು ಪಾಲ್ಗೊಳ್ಳದಂತೆ ನಿರ್ದೇಶನ ನೀಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಈ ಹಿಂದೆ ಹಲವು ಬಾರಿ ನಡೆದಿದ್ದ ಬಿಸಿಸಿನ ಶಿಸ್ತು ಸಮಿತಿಯ ತನಿಖೆಯ ವೇಳೆ ಅಸದ್ ರೌಫ್ ಹಲವು ಕಾರಣಗಳನ್ನು ನೀಡಿ ತಪ್ಪಿಸಿಕೊಂಡಿದ್ದಾರೆ. ಸಮಿತಿಯೇ ಸ್ವತಃ 2 ವಾರಗಳ ಗಡುವು ನೀಡಿತ್ತಾದರೂ, ರೌಫ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಅವರಿಗೆ ನೀಡಿದ್ದ ಅವಕಾಶಗಳು ಮೀರಿದ್ದು, ಇನ್ನು ನಿರ್ಧಾರ ಕೈಗೊಳ್ಳುವ ಸಮಯ ಬಂದಿದೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ಮೂಲಗಳ ಪ್ರಕಾರ ಇಂದು ಮುಂಬೈನಲ್ಲಿ ನಡೆದ ಶಿಸ್ತುಪಾಲನ ಸಮಿತಿ ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್, ಮಾಜಿ ಕಾರ್ಯದರ್ಶಿ ನಿರಂಜನ್ ಶಾ, ಮಧ್ಯ ಪ್ರದೇಶ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಜ್ಯೋತಿರಾಧಿತ್ಯ ಸಿಂಧ್ಯಾ ಅವರು ಪಾಲ್ಗೊಂಡಿದ್ದರು.