ಬೆಂಗಳೂರು: 2016 ಬಹುಶಃ ಭಾರತ ಕ್ರಿಕೆಟ್ ತಂಡದ ಆಟಗಾರರ ಪಾಲಿಗೆ ವೈವಾಹಿಕ ವರ್ಷ ಎನ್ನಬಹುದು. ಏಕೆಂದರೆ ಸಾಲು ಸಾಲು ಕ್ರಿಕೆಟಿಗರು 2016ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಇದೀಗ ಕರ್ನಾಟಕ ಮೂಲದ ಕ್ರಿಕೆಟಿಗ ರಾಬಿನ್ ಉತ್ತಪ್ಪ ಸರದಿ. ಇದೇ ಮಾರ್ಚ್ 3ರಂದು ರಾಬಿನ್ ಉತ್ತಪ್ಪ ಅವರ ವಿವಾಹ ನೆರವೇರಲಿದ್ದು, ತಮ್ಮ ದೀರ್ಘಕಾಲದ ಗೆಳತಿ ಶೀತಲ್ ಗೌತಮ್ ಅವರನ್ನು ಉತ್ತಪ ವರಿಸಲಿದ್ದಾರೆ. ವಿವಾಹ ಮಾರ್ಚ್ 3ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
30 ವರ್ಷದ ಉತ್ತಪ್ಪ, ಮಾಜಿ ಟೆನಿಸ್ ಆಟಗಾರ್ತಿ ಶೀತಲ್‌ರನ್ನು ಈ ವರ್ಷವೇ ವರಿಸುವುದಾಗಿ ಜನವರಿಯಲ್ಲೇ ಹೇಳಿದ್ದರು. ಈ ಬಾರಿಯ ರಣಜಿ ಟ್ರೋಫಿಯಲ್ಲಿ ಹ್ಯಾಟ್ರಿಕ್ ಶತಕ ಸಿಡಿಸಿ ಮಿಂಚಿದ್ದ ರಾಬಿನ್ ಉತ್ತಪ್ಪ ಮುಂದಿನ ಐಪಿಎಲ್ ಸರಣಿಗೂ ಮುನ್ನವೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಉತ್ತಪ್ಪ- ಶೀತಲ್ ನಿಶ್ಚಿತಾರ್ಥ ಮಾರಿಷಸ್‌ನಲ್ಲಿ ಕಳೆದ ವರ್ಷಾಂತ್ಯದಲ್ಲಿ ನಡೆದಿತ್ತು. ಈ ಬಗ್ಗೆ ಉತ್ತಪ್ಪ ಟ್ವಿಟರ್‌ನಲ್ಲಿ ಪ್ರಕಟಿಸಿದ್ದರು. 2008ರಿಂದಲೂ ಅವರಿಬ್ಬರು ಜತೆಯಾಗಿ ಸುತ್ತಾಡುತ್ತಿದ್ದಾರೆ.
ಈ ಹಿಂದೆ ಕ್ರಿಕೆಟಿಗ ರವೀಂದ್ರ ಜಡೇಜಾ ಮತ್ತು ಯುವರಾಜ್ ಸಿಂಗ್ ಅವರ ಮದುವೆ ವಿಚಾರ ಮಾಧ್ಯಮಗಳಲ್ಲಿ ವ್ಯಾಪಕ ಸುದ್ದಿಯಾಗಿತ್ತು.