ಪರ್ತ್: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ಪರಾಭವಗೊಂಡರೂ ಬರಿಂದರ್ ಸಿಂಗ್ ಸ್ರಾನ್ ಎಂಬ ಬೌಲರ್ ಟೀಂ ಇಂಡಿಯಾದಲ್ಲಿ ಗಮನ ಸೆಳೆದಿದ್ದಾರೆ. ಭಾರತ ತಂಡ ಗಳಿಸಿದ 5 ವಿಕೆಟ್‌ಗಳಲ್ಲಿ ಮೂರು ವಿಕೆಟ್ ಕಬಳಿಸಿದ್ದು ಬರಿಂದರ್! ಈತ ಆಸೀಸ್ ದಾಂಡಿಗರಾದ ಆರೋನ್ ಫಿಂಚ್ (9 ರನ್‌ಗಳು), ಡೇವಿಡ್ ವಾರ್ನರ್ (5 ರನ್) ಮತ್ತು ಸ್ಟೀವ್ ಸ್ಮಿತ್ (149)ರ ವಿಕೆಟ್ ಕಬಳಿಸಿ ಹೀರೋ ಆಗಿದ್ದಾನೆ.
ಪಂದ್ಯದ ಮೊದಲ ಓವರಗಳಲ್ಲಿಯೇ ಆಸ್ಟ್ರೇಲಿಯಾದ ಪ್ರಬಲ ದಾಂಡಿಗರ ವಿಕೆಟ್ ಕಬಳಿಸಿ ಭಾರತದ ಸ್ಥೈರ್ಯವನ್ನು ಈತ ಹೆಚ್ಚಿಸಿದ್ದ. ಆದರೆ ಭಾರತಕ್ಕೆ ಆಸ್ಟ್ರೇಲಿಯಾವನ್ನು ಜಯಿಸಲು ಸಾಧ್ಯವಾಗಲೇ ಇಲ್ಲ. ಭಾರತ ಸೋತರೂ 23ರ ಹರೆಯದ ಸ್ರಾನ್ ನ ಕೈಚಳಕ ಹಾಗೂ ಸಾಮರ್ಥ್ಯ ಇಲ್ಲಿ ಮನವರಿಕೆಯಾಗಿತ್ತು.
ಬಾಕ್ಸಿಂಗ್‌ನಿಂದ ಕ್ರಿಕೆಟ್‌ಗೆ
6 ವರುಷಗಳ ಹಿಂದೆ ಬರೀಂದರ್ ಸಿಂಗ್ ಜೀವನವನ್ನು ಬದಲಿಸಿದ್ದು ಒಂದು ಜಾಹೀರಾತು. ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ತಂಡವಾದ ರಾಜಸ್ತಾನ್ ರಾಯಲ್ಸ್‌ಗೆ ಕ್ರೀಡಾಪಟುಗಳನ್ನು ಆಹ್ವಾನಿಸುವ ಜಾಹೀರಾತು ಅದಾಗಿತ್ತು. ಆಗ ಹರ್ಯಾಣದ ಬಿವಾನಿ ಬಾಕ್ಸಿಂಗ್ ಕ್ಲಬ್‌ನಲ್ಲಿ ಬಾಕ್ಸರ್ ಆಗಿದ್ದರು ಬರಿಂದರ್. ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಿದ್ದ ವಿಜೇಂದರ್ ಸಿಂಗ್ ನ ಕೋಚ್ ಜಗದೀಶ್ ಸಿಂಗ್ ಗರಡಿಯಲ್ಲಿ ಬರಿಂದರ್ ಬಾಕ್ಸಿಂಗ್ ಕಲಿಯುತ್ತಿದ್ದರು. ಆದರೆ ಅದರಲ್ಲಿ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಹರ್ಯಾಣ ಮತ್ತು ಪಂಜಾಬ್ ಗಡಿಯಲ್ಲಿರುವ ಡಬ್‌ವಾಲಿ ಎಂಬ ಗ್ರಾಮದಲ್ಲಿ ರೈತನ ಮಗನಾಗಿ ಜನಿಸಿದ ಬರಿಂದರ್ ಅಲ್ಲಿಗೆ ಹರ್ಯಾಣದ ಬಾಕ್ಸಿಂಗ್ ಬಿಟ್ಟು ಪಂಜಾಬ್‌ನಲ್ಲಿ ಕ್ರಿಕೆಟ್ ಟೀಂಗೆ ಸೇರ್ಪಡೆಯಾದರು.
ಇತ್ತ ಐಪಿಎಲ್‌ನಲ್ಲಿ ಅವಕಾಶ ಸಿಗದೇ ಹೋದರೂ ಪಂಜಾಬ್‌ನಲ್ಲಿ ಕಿಂಗ್ಸ್ ಕಪ್ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿ ಬಿಟ್ಟಿತು. ಕ್ರಿಕೆಟ್ ಆಡುವಾಗ ಶೂ ಕೂಡಾ ಧರಿಸದೇ ಆಡುವ ಅಮೆಚ್ಯುರ್ ಕ್ರಿಕೆಟಿಗ ಆಗಿದ್ದ ಬರಿಂದರ್. ಹೀಗಿರುವಾಗ ಸ್ಫೋರ್ಟ್ಸ್ ಡ್ರಿಂಕ್ಸ್ ಕಂಪನಿಯೊಂದು ಆಯೋಜಿಸಿದ ಪಂದ್ಯವೊಂದು ಈತನಿಗೆ ಬ್ರೇಕ್ ನೀಡಿತು. ಆಮೇಲೆ ಮೊಹಾಲಿ ಸ್ಟೇಡಿಯಂ ನಲ್ಲಿ ಪ್ರಾಕ್ಟೀಸ್ ಮಾಡಲು ಕಿಂಗ್ಸ್ ಇಲೆವೆನ್ ಅಧಿಕೃತರು ಅನುಮತಿ ನೀಡಿದರು.
ಇದರ ನಡುವೆ ಇಂಡಿಯಾ ಅಂಡರ್ 19 ಪಂದ್ಯದಲ್ಲಿ ಗೆದ್ದಾಗ ದುಬೈನಲ್ಲಿ ಐಸಿಸಿ ಅಕಾಡೆಮಿಯಲ್ಲಿ ತರಬೇತಿ ಸಿಕ್ಕಿತು. ಅಂತರ್ ಜಿಲ್ಲಾ ಕ್ರಿಕೆಟ್ ಚಾಂಪಿಯನ್‌ಶಿಪ್ ನಲ್ಲಿ ಸ್ರಾನ್ ನ ಪ್ರದರ್ಶನ ಕಂಡು ಪಂಜಾಬ್ ಕೋಚ್ ವಿಕ್ರಂ ರಾಥೋಡ್ , ಸ್ರಾನ್ ಅವರನ್ನು ಪಂಜಾಬ್ ಟೀಂಗೆ ಆಯ್ಕೆ ಮಾಡಿದರು. 2011-12ರ ಋತುವಿನಲ್ಲಿ 14 ಪಂದ್ಯಗಳಲ್ಲಿ 32 ವಿಕೆಟ್ ಸ್ರಾನ್ ಕಬಳಿಸಿದ್ದರು. 2015ರಲ್ಲಿ ರಾಜಸ್ತಾನ್ ರಾಯಲ್ಸ್ ನ ಓಪನ್ ಟ್ರಯಲ್ಸ್‌ಗೆ ಹೋದಾಗ ರಾಹುಲ್ ದ್ರಾವಿಡ್‌ಗೆ ಸ್ರಾನ್ ಪ್ರದರ್ಶನ ಇಷ್ಟವಾಯ್ತು. ಹಾಗೆ ಟೀಂನಲ್ಲಿ ಅವಕಾಶವೂ ಸಿಕ್ಕಿ ಬಿಟ್ಟಿತು.
ಆದರೆ ಇನ್ನೊಂದು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಮತ್ತಷ್ಟು ಕಾಯಬೇಕಾಗಿ ಬಂತು. ಏತನ್ಮಧ್ಯೆ, ರಣಜಿ ಪಂದ್ಯದಲ್ಲಿ ಪಾದರ್ಪಣೆ ಮಾಡಿದ ಸ್ರಾನ್ ಬ್ಯಾಟಿಂಗ್ ಪಿಚ್‌ನಲ್ಲಿ 6 ವಿಕೆಟ್ ಗಳಿಸಿದರು. ಅಲ್ಲಿನ ಸ್ರಾನ್‌ನ ಪ್ರದರ್ಶನ ಕಂಡ ಯುವರಾಜ್ ಸಿಂಗ್, ಜಹೀರ್ ಖಾನ್‌ರ ಬೌಲಿಂಗ್‌ನ್ನು ನೆನಪಿಸುವಂತಿದೆ ಸ್ರಾನ್ ಬೌಲಿಂಗ್ ಎಂದು ಟ್ವೀಟ್ ಮಾಡಿದ್ದರು. ಈ ಹಿಂದೆ ನಡೆದ ದಕ್ಷಿಣ ಆಫ್ರಿಕಾ ಪ್ರವಾಸ ಪಂದ್ಯದ ನಡುವೆ ನೆಟ್ ಪ್ರಾಕ್ಟೀಸ್‌ಗೆ ಬರುವಂತೆ ವಿಕ್ರಂ ರಾಥೋಡ್ ಹೇಳಿದ್ದರು. ಮೂರು ತಿಂಗಳ ನಂತರ ಒಂದು ಫ್ಯಾಂಟಸಿ ಕಥೆಯಂತೆ ಸ್ರಾನ್ ಟೀಂ ಇಂಡಿಯಾಗೆ ಸೇರ್ಪಡೆಯಾದರು.