ಲಂಡನ್: 130 ವರ್ಷಗಳ ವಿಂಬಲ್ಡನ್ ಟೆನ್ನಿಸ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸ್ವಾರಸ್ಯಕರ ಘಟನೆಯೊಂದು ಬ್ರಿಟನ್ ನಲ್ಲಿ ನಡೆದಿದ್ದು, ಆಟದ ಮಧ್ಯೆ ಆಟಗಾರರಿಬ್ಬರು ಶೌಚ ಗೃಹಕ್ಕೆ ತೆರಳಲು ಅನುಮತಿ ಕೇಳಿ ರೆಫರಿ ನಿರಾಕರಿಸಿದ್ದರಿಂದ ರೊಚ್ಚಿಗೆದ್ದು ಮೈದಾನದಲ್ಲೇ "ಸುಸು" ಮಾಡುವ ಬೆದರಿಕೆ ಹಾಕಿದ್ದಾರೆ.
ಲಂಡನ್ ನಲ್ಲಿ ನಡೆಯುತ್ತಿರುವ ವಿಂಬಲ್ಡನ್ ಟೂರ್ನಿಯಲ್ಲಿ ಉರುಗ್ವೆ ಮೂಲದ ಪ್ಯಾಬ್ಲೋ ಕ್ಯುವಸ್ ಮತ್ತು ಸ್ಪೈನ್ ಮೂಲದ ಮಾರ್ಸೆಲ್ ಗ್ರಾನೋಲ್ಲರ್ಸ್ ಜೋಡಿ ರೆಫರಿಗೆ ಬೆದರಿಕೆ ಹಾಕಿದ್ದು, ಈ ಘಟನೆ ಇದೀಗ ವಿಶ್ವಾದ್ಯಂತ ವ್ಯಾಪಕ ಚರ್ಚೆಯಾಗಿದ್ದು, ವಿಡಿಯೋ ವೈರಲ್ ಆಗಿದೆ. ಕಳೆದ ಸೋಮವಾರ ವಿಂಬಲ್ಡನ್ ಟೆನ್ನಿಸ್ ಟೂರ್ನಿಯ ಡಬಲ್ಸ್ ಪಂದ್ಯದಲ್ಲಿ ಪ್ಯಾಬ್ಲೋ ಕ್ಯುವಸ್-ಮಾರ್ಸೆಲ್ ಗ್ರಾನೋಲ್ಲರ್ಸ್ ಜೋಡಿ ಆದಿಲ್ ಶಮ್ಸದಿನ್-ಜಾನ್ ಮರ್ರೆ ಜೋಡಿಯನ್ನು ಎದುರಿಸಿತ್ತು.
ಸತತ 4 ಗಂಟೆಗಳ ಕಾಲ ಈ ಮ್ಯಾರಥಾನ್ ಆಟ ನಡೆದಿದ್ದು, ಪಂದ್ಯದ ಮಧ್ಯಭಾಗದಲ್ಲಿ ರೆಫರಿ ಬಳಿ ಬಂದ ಪ್ಯಾಬ್ಲೋ ಕ್ಯುವಸ್-ಮಾರ್ಸೆಲ್ ಗ್ರಾನೋಲ್ಲರ್ಸ್ ಜೋಡಿ ಶೌಚಾಲಯಕ್ಕೆ ತೆರಳಬೇಕಿದೆ. ಹೀಗಾಗಿ ವಿರಾಮ ನೀಡಿ ಎಂದು ಕೇಳಿದ್ದಾರೆ. ಆದರೆ ಅದಾಗಲೇ ಪಂದ್ಯ ವಿಳಂಬವಾಗಿದ್ದು, ಮತ್ತಷ್ಟು ವಿಳಂಬವಾಗುವುದರಿಂದ ರೆಫರಿ ಆರೆಲಿ ಟಾರ್ಟೆ ಅವರು ಆಟಗಾರರಿಗೆ ವಿರಾಮ ನೀಡಲು ನಿರಾಕರಿಸಿದ್ದಾರೆ. ಬಳಿಕ ರೆಫರಿಯನ್ನು ವಿರಾಮಕ್ಕಾಗಿ ಆಟಗಾರರು ಪೀಡಿಸಿದ್ದು, ಇದರಿಂದ ರೊಚಿಗ್ಗೆದ್ದ ಆಟಗಾರರು ತಮ್ಮ ಕೈಯಲ್ಲಿದ್ದ ಟೆನ್ನಿಸ್ ಬಾಲ್ ಅನ್ನು ಮೈದಾನದ ಹೊರಗಡೆಗೆ ಹೊಡೆದಿದ್ದಾರೆ. ಆಟಗಾರರ ವರ್ತನೆಯಿಂದ ಬೇಸರಗೊಂಡ ರೆಫರಪಿ ಇಬ್ಬರಿಗೂ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಮತ್ತಷ್ಟು ಕ್ರೋಧಗೊಂಡ ಆಟಗಾರರು ರೆಫರಿಯನ್ನುದ್ದೇಶಿಸಿ ವಿರಾಮ ನೀಡದಿದ್ದರೆ, ಮೈದಾನದಲ್ಲೇ "ಸುಸು" ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಇದರಿಂದ ಆಕ್ರೋಶಗೊಂಡ ರೆಫರಿ ಎದುರಾಳಿ ಆಟಗಾರರಿಗೆ ಮೂರು ಮ್ಯಾಚ್ ಪಾಯಿಂಟ್ ಗಳನ್ನು ನೀಡಿದ್ದಾರೆ. ಇದರಿಂದ ಬೇಸರಗೊಂಡ ಆಟಗಾರರು ಪಂದ್ಯವನ್ನೇ ಅರ್ಧಕ್ಕೆ ಸ್ಥಗಿತಗೊಳಿಸಿ ಆಟವಾಡದೇ ತಮ್ಮ ಕುರ್ಚಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಅಂತಿಮವಾಗಿ ಮೂರು ಮ್ಯಾಚ್ ಪಾಯಿಂಟ್ ಅನ್ನು 2 ಕ್ಕೆ ಇಳಿಸಿದಾಗ 10 ನಿಮಿಷಗಳ ಬಳಿಕ ಬೇರೆ ದಾರಿಯಿಲ್ಲದೇ ಆಟಗಾರರು ಪಂದ್ಯ ಮುಂದುವರೆಸಿದ್ದಾರೆ. ಈ ಪಂದ್ಯದಲ್ಲಿ ಪ್ಯಾಬ್ಲೋ ಕ್ಯುವಸ್-ಮಾರ್ಸೆಲ್ ಗ್ರಾನೋಲ್ಲರ್ಸ್ ಜೋಡಿ ಆದಿಲ್ ಶಮ್ಸದಿನ್-ಜಾನ್ ಮರ್ರೆ ಜೋಡಿ ವಿರುದ್ಧ 6-3, 4-6, 6-4, 3-6, 14-12. ನೇರ ಸೆಟ್ ಗಳ ಅಂತರದಿಂದ ಸೋಲು ಕಂಡಿದೆ.