ಕ್ರೀಡೆ

ರಿಯೊ ಒಲಿಂಪಿಕ್ಸ್: ನರಸಿಂಗ್ ಯಾದವ್ ಬದಲಿಗೆ ಪರ್ವೀಣ್ ರಾಣಾಗೆ ಅವಕಾಶ

Srinivasamurthy VN

ನವದೆಹಲಿ: ರಿಯೋ ಒಲಿಂಪಿಕ್ಸ್ ಗೆ ಭಾರತ ತಂಡವನ್ನು ಪ್ರತಿನಿಧಿಸುವ ಪಟ್ಟಿಯಲ್ಲಿ ಸ್ಥಾನ ಸಂಪಾದಿಸಿದ್ದ ಕುಸ್ತಿಪಟು ನರಸಿಂಗ್ ಯಾದವ್ ಡೋಪಿಂಗ್ ಟೆಸ್ಟ್ ನಲ್ಲಿ ಸಿಕ್ಕಿಬಿದ್ದು, ಕ್ರೀಡಾಕೂಟದಿಂದ  ಹೊರ ನಡೆದ ಹಿನ್ನಲೆಯಲ್ಲಿ ಅವರ ಸ್ಥಾನಕ್ಕೆ ಮತ್ತೋರ್ವ ಕುಸ್ತಿಪಟು ಪರ್ವೀಣ್ ರಾಣಾ ಅವರಿಗೆ ಅವಕಾಶ ಕಲ್ಪಿಸಲಾಗಿದೆ.

ರಿಯೋ ಒಲಿಂಪಿಕ್ಸ್ ನ 74 ಕೆಜಿ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲು ಪರ್ವೀಣ್ ರಾಣಾ ಅವರಿಗೆ ಅವಕಾಶ ನೀಡಲು ಭಾರತೀಯ ಕುಸ್ತಿ ಸಂಸ್ಥೆ (ಡಬ್ಲ್ಯುಎಫ್ಐ) ನಿರ್ಧರಿಸಿದೆ.  ಅಲ್ಲದೆ ಪರ್ವೀಣ್ ರಾಣಾ ಹೆಸರನ್ನು ಅಧಿಕೃತಗೊಳಿಸಿದೆ ಎಂದು ಹೇಳಲಾಗಿದೆ. 2014ರಲ್ಲಿ ಅಮೆರಿಕದಲ್ಲಿ ನಡೆದ ಡೇವ್ ಸ್ಮಾರಕ ಟೂರ್ನಿಯಲ್ಲಿ ಚಿನ್ನದ ಪದಕ ಸಾಧನೆ ಮಾಡಿದ್ದ 23 ವರ್ಷದ  ಪರ್ವೀಣ್ ರಾಣಾ, 2015 ರಲ್ಲಿ ಇಟಲಿಯಲ್ಲಿ ನಡೆದ 70 ಕೆಜಿ ವಿಭಾಗದಲ್ಲೂ ಚಿನ್ನದ ಪದಕ ಗೆದ್ದಿರುವ ಸಾಧನೆ ಮಾಡಿದ್ದಾರೆ.

ಸದ್ಯ ಭಾರತದ ಕ್ರೀಡಾಪಟುಗಳು ಜಾರ್ಜಿಯಾದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಆಗಸ್ಟ್ 5ರಿಂದ ಒಲಿಂಪಿಕ್ಸ್ 2016 ಆರಂಭಗೊಳ್ಳಲಿದೆ.

2015ರ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ 74ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ರಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದ ನರಸಿಂಗ್ ಯಾದವ್ ಬಳಿಕ ಜೂನ್ ತಿಂಗಳಲ್ಲಿ  ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ ನಾಡಾ ನಡೆಸಿದ ಪರೀಕ್ಷೆಯಲ್ಲಿ ಸಿಕ್ಕಿಬಿದಿದ್ದರು. ಅಲ್ಲದೇ ರಿಯೊ ಒಲಿಂಪಿಕ್ಸ್ ಕ್ರೀಡಾಕೂಟದಿಂದಲೇ ಅವರನ್ನು ಕೈ ಬಿಡಲಾಗಿತ್ತು.

SCROLL FOR NEXT