ನವದೆಹಲಿ: ವೃತ್ತಿಪರ ಬಾಕ್ಸಿಂಗ್ನಲ್ಲಿ ಸತತ 6 ಅಮೋಘ ಜಯಗಳಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಜುಲೈ 16ರಂದು ನಡೆಯಲಿರುವ ಪಂದ್ಯದಲ್ಲಿ ಕೆರ್ರಿ ಹೋಪ್ ಅವರೊಂದಿಗೆ ಸೆಣೆಸಲಿದ್ದಾರೆ.
30 ವರ್ಷದ ವಿಜೇಂದರ್ ಸಿಂಗ್ ವೃತ್ತಪರ ಬಾಕ್ಸಿಂಗ್ನಲ್ಲಿ ಅತ್ಯುತ್ತಮ ಆರಂಭ ಪಡೆದಿದ್ದು, ಇದುವರೆಗೆ ಆಡಿರುವ ಎಲ್ಲಾ 6 ಪಂದ್ಯಗಳಲ್ಲಿ ವಿಜೇಂದರ್ ನಾಕೌಟ್ ಗೆಲುವು ಸಾಧಿಸಿದ್ದಾರೆ. ಇನ್ನು ಮಾಜಿ ಯೂರೋಪಿಯನ್ ಚಾಂಪಿಯನ್ ಕೆರ್ರಿ ಹೋಪ್ ಕೂಡ ಉತ್ತಮ ಫಾರ್ಮ್ ನಲ್ಲಿದ್ದು, ಹೋಪ್ ಇದುವರೆಗೆ 30 ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ 2 ನಾಕೌಟ್ ಜಯ ಸೇರಿದಂತೆ 23 ಪಂದ್ಯಗಳಲ್ಲಿ ಹೋಪ್ ಜಯಿಸಿದ್ದಾರೆ.
ಡಬ್ಲ್ಯೂಬಿಒ ಏಷ್ಯಾ ಪ್ರಶಸ್ತಿ ಗೆಲ್ಲುವ ನಿಟ್ಟಿನಲ್ಲಿ ವಿಜೇಂದರ್ ಸಿಂಗ್ ಗೆ ಈ ಪಂದ್ಯ ಪ್ರಮುಖವಾಗಿದ್ದು, ಪ್ರಮುಖ ವಿಚಾರವೆಂದರೆ ಈ ಬಹು ನಿರೀಕ್ಷಿತ ಪಂದ್ಯ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಈ ಪಂದ್ಯ ನಡೆಯುತ್ತಿದೆ. ಹೀಗಾಗಿ ತವರಿನಲ್ಲಿ ನಡೆಯುತ್ತಿರುವ ಈ ಪಂದ್ಯದ ಕುರಿತಂತೆ ವಿಜೇಂದರ್ ಸಿಂಗ್ ಮೇಲೆ ಒತ್ತಡ ಹೆಚ್ಚಾಗಿದ್ದು, ತವರಿನಲ್ಲಿ ನಡೆಯುವ ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿ ವಿಜೇಂದರ್ ಸಿಂಗ್ ಇದ್ದಾರೆ.
ವಿಜೇಂದರ್ ಸಿಂಗ್ ಗೆ ಹೋಪ್ ಸವಾಲು
ಇದೇ ವೇಳೆ ಭಾರತದಲ್ಲಿ ಪಂದ್ಯ ನಡೆಯುತ್ತಿರುವ ಹಿನ್ನಲೆಯಲ್ಲಿ ಮಾತನಾಡಿದ ಎದುರಾಳಿ ಬಾಕ್ಸರ್ ಕೆರ್ರಿ ಹೋಪ್, "ವಿಜೇಂದರ್ ಸಿಂಗ್ ಭಾರತದಲ್ಲಿ ಸೂಪರ್ಸ್ಟಾರ್ ಇರಬಹುದು. ಆದರೆ ನನಗೆ ಆತ ಒಬ್ಬ ಬಾಕ್ಸರ್ ಮಾತ್ರ. ವಿಜೇಂದರ್ ಸಿಂಗ್ ವೃತ್ತಿಪರ ಬಾಕ್ಸಿಂಗ್ಗೆ ಬಂದು 1 ವರ್ಷವಾಗಿದೆ. ನಾನು 12 ವರ್ಷಗಳಿಂದ ವೃತ್ತಿಪರ ಬಾಕ್ಸಿಂಗ್ನಲ್ಲಿದ್ದೇನೆ. ಜತೆಗೆ ನಾನು 3ನೇ ಶ್ರೇಯಾಂಕ ಕೂಡ ಪಡೆದಿದ್ದೆ. ಭಾರತದ ಬಾಕ್ಸಿಂಗ್ ಅಭಿಮಾನಿಗಳು ವಿಜೇಂದರ್ಗೆ ಬೆಂಬಲ ನೀಡಬಹುದು. ಆದರೆ ತವರಿನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ವಿಜೇಂದರ್ ಸಿಂಗ್ ಸಾಕಷ್ಟು ಒತ್ತಡದಲ್ಲಿದ್ದಾರೆ. ನನ್ನನ್ನು ಸೋಲಿಸಲು ಅವರು ಕಠಿಣ ಪರಿಶ್ರಮ ಪಡಬೇಕು ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಜುಲೈ 16ರ ಪಂದ್ಯವನ್ನು ಕಾದು ನೋಡಿ ಎಂದಷ್ಟೇ ಹೇಳಿ ಸುಮ್ಮನಾಗಿದ್ದಾರೆ.
ಪ್ರಧಾನಿ ಮೋದಿ, ಸಚಿನ್ ಗೆ ವಿಜೇಂದರ್ ಆಹ್ವಾನ, ಸೆಹ್ವಾಗ್ ಸಿಕ್ತು ಟಿಕೆಟ್
ದೆಹಲಿಯ ತ್ಯಾಗರಾಜ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯವನ್ನು ವೀಕ್ಷಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಗಣ್ಯರನ್ನು ಪಂದ್ಯ ವೀಕ್ಷಿಸಲು ಆಮಂತ್ರಣ ನೀಡಿದ್ದಾರೆ. ಇನ್ನು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರಿಗೆ ಪಂದ್ಯ ವೀಕ್ಷಣೆಯ ಮೊದಲ ಟಿಕೆಟ್ ದೊರೆತಿದೆ.