ಲಂಡನ್: ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಪೆನಾಲ್ಟಿ ಶೂಟೌಟ್ನಲ್ಲಿ 1-3 ಗೋಲುಗಳ ಅಂತರದಿಂದ ಸೋಲನುಭವಿಸಿದ ಭಾರತ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.
ಇದೇ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಫೈನಲ್ ತಲುಪಿದ್ದ ಭಾರತ ತಂಡ ಅಚ್ಚರಿ ಫಲಿತಾಂಶದ ಮೂಲಕ ಪ್ರಶಸ್ತಿ ತನ್ನದಾಗಿಸಿಕೊಳ್ಳುವ ಮಹದಾಸೆ ಹೊಂದಿತ್ತು. ಆದರೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಭಾರತದ ಆಸೆಗೆ ಪೆನಾಲ್ಟಿ ಶೂಟೌಟ್ ನಲ್ಲಿ ಗೋಲುಗಳನ್ನು ಗಳಿಸುವ ಮೂಲಕ ನೀರೆರಚಿತು. ನಿಗದಿತ 60 ನಿಮಿಷಗಳ ಆಟದಲ್ಲಿ ಉಭಯ ತಂಡಗಳು ಗೋಲು ಗಳಿಸಲು ವಿಫಲವಾದ ಕಾರಣ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆಹೋಗಬೇಕಾಯಿತು.
ಭಾರತದ ಪರ ಹರ್ಮನ್ಪ್ರೀತ್ ಸಿಂಗ್ ಗೋಲು ಗಳಿಸಿದರೆ, ಎಸ್.ಕೆ.ಉತ್ತಪ್ಪ, ಎಸ್.ವಿ.ಸುನಿಲ್ ಮತ್ತು ಸುರಿಂದರ್ ಕುಮಾರ್ ಗೋಲು ಗಳಿಸುವಲ್ಲಿ ವಿಫಲರಾದರು. ಆದರೆ ಆಸ್ಟ್ರೇಲಿಯಾ ಪರ ಅರನ್ ಜಲಾವಸ್ಕಿ, ಡೇನಿಯಲ್ ಬೇಲೆ ಮತ್ತು ಸೀಮನ್ ಆರ್ಚರ್ಡ್ ಗೋಲು ಗಳಿಸಿದರೆ, ಟ್ರೆಂಟ್ ಮಿಟ್ಟನ್ ಗೋಲು ಗಳಿಸಲು ವಿಫಲರಾದರು. ಈ ಮೂಲಕ ಆಸ್ಟ್ರೇಲಿಯಾ 3-1 ಗೋಲುಗಳ ಅಂತರದರಲ್ಲಿ ಗೆಲುವು ಸಾಧಿಸಿ ಪ್ರಶಸ್ತಿಗೆ ಮುತ್ತಿಟ್ಟಿತು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ 14ನೇ ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತು.
ಭಾರತ ಫೈನಲ್ ನಲ್ಲಿ ಸೋಲು ಕಂಡಿದೆಯಾದರೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ತನ್ನ ಅತ್ಯುತ್ತಮ ಪ್ರದರ್ಶನ ನೀಡಿದೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಭಾರತ ಫೈನಲ್ ಪ್ರವೇಶಿಸಿದ್ದು, ಇದಕ್ಕೂ ಮುನ್ನ 1982ರಲ್ಲಿ ಆ್ಯಮ್ ಸ್ಟರ್ ಡ್ಯಾಮ್ ನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದಿತ್ತು.