Image courtsey: Twitter - @iam_juhi (Juhi Chawla)
ಬೆಂಗಳೂರು: ಭಾರತೀಯ ಕ್ರಿಕೆಟಿಗರ ವೈವಾಹಿಕ ಜೀವನ ಸರಣಿ ಮುಂದುವರೆದಿದ್ದು, ಕರ್ನಾಟಕ ಮೂಲದ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರು ಗರುವಾರ ತಮ್ಮ ದೀರ್ಘಕಾಲದ ಗೆಳತಿ ಶೀತಲ್ ಗೌತಮ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇಂದು ನಗರದ ಖಾಸಗಿ ಹೋಟೆಲ್ನಲ್ಲಿ ಅದ್ಧೂರಿ ಸಮಾರಂಭದಲ್ಲಿ ಉತ್ತಪ್ಪ ಶೀತಲ್ ಅವರೊಂದಿಗೆ ಹಸೆಮಣೆ ಏರಿದರು. ಮಾರ್ಚ್ 13ರಂದು ಮಡಿಕೇರಿಯಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
30 ವರ್ಷದ ಉತ್ತಪ್ಪ, ಮಾಜಿ ಟೆನಿಸ್ ಆಟಗಾರ್ತಿ ಶೀತಲ್‌ರನ್ನು ಈ ವರ್ಷವೇ ವರಿಸುವುದಾಗಿ ಜನವರಿಯಲ್ಲೇ ಹೇಳಿದ್ದರು. ಈ ಬಾರಿಯ ರಣಜಿ ಟ್ರೋಫಿಯಲ್ಲಿ ಹ್ಯಾಟ್ರಿಕ್ ಶತಕ ಸಿಡಿಸಿ ಮಿಂಚಿದ್ದ ರಾಬಿನ್ ಉತ್ತಪ್ಪ ಮುಂದಿನ ಐಪಿಎಲ್ ಸರಣಿಗೂ ಮುನ್ನವೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಉತ್ತಪ್ಪ- ಶೀತಲ್ ನಿಶ್ಚಿತಾರ್ಥ ಕಳೆದ ವರ್ಷಾಂತ್ಯದಲ್ಲಿ ಮಾರಿಷಸ್‌ನಲ್ಲಿ ನಡೆದಿತ್ತು. ಈ ಬಗ್ಗೆ ಉತ್ತಪ್ಪ ಟ್ವಿಟರ್‌ನಲ್ಲಿ ಪ್ರಕಟಿಸಿದ್ದರು. 2008ರಿಂದಲೂ ಅವರಿಬ್ಬರು ಜತೆಯಾಗಿ ಸುತ್ತಾಡಿದ್ದರು.
ಕಾಲೇಜಿನಲ್ಲಿ ರಾಬಿನ್ ಉತ್ತಪ್ಪ ಸೀನಿಯರ್ ಆಗಿದ್ದ ಶೀತಲ್ ಗೌತಮ್ ಆಗಲೇ ರಾಷ್ಟ್ರೀಯ ಮಟ್ಟದ ಟೆನಿಸ್ನಲ್ಲಿ ಆಡಿದ್ದರು. ಕಾಮನ್ ಫ್ರೆಂಡ್ ಸಹಾಯದಿಂದ ಶೀತಲ್‌ರನ್ನು ಭೇಟಿಯಾಗಿದ್ದ ಉತ್ತಪ್ಪ 6 ವರ್ಷ ಸ್ನೇಹಿತರಾಗಿ ತಿರುಗಾಡಿದ್ದರು. 2013ರಲ್ಲಿ ಇವರ ಸ್ನೇಹ ಪ್ರೀತಿಗೆ ತಿರುಗಿತ್ತು. ಕಳೆದ ನವೆಂಬರ್ನಲ್ಲಿ ನೀಡಿದ ಸಂದರ್ಶನದಲ್ಲಿ ಮಾರ್ಚ್ ವೇಳೆಗೆ ಶೀತಲ್‌ರನ್ನು ವಿವಾಹವಾಗುವುದಾಗಿ ಹೇಳಿದ್ದರು.