ನವದೆಹಲಿ: ರಾಜಕಾರಣಿಗಳನ್ನು ಬಿಸಿಸಿಐನ ಉನ್ನತ ಹುದ್ದೆಗಳಿಂದ ದೂರವಿಡುವ ಶಿಫಾರಸ್ಸು ಮಾಡಿರುವ ನ್ಯಾಯಮೂರ್ತಿ ಆರ್ಎಂ ಲೋಧಾ ನೇತೃತ್ವದ ಸಮಿತಿಯ ವರದಿ ಜಾರಿಗೆ ಹಿಂದೇಟು ಹಾಕುತ್ತಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದ್ದು, ಲೋಧಾ ವರದಿಯನ್ನು ಜಾರಿಗೊಳಿಸಬೇಕು ಎಂದು ಕಟ್ಟಪ್ಪಣೆ ಮಾಡಿದೆ.
ನ್ಯಾಯಮೂರ್ತಿ ಆರ್ ಎಂ ಲೋಧಾ ಸಮಿತಿಯ ಕೆಲವು ಶಿಫಾರಸ್ಸುಗಳಿಗೆ ಬಿಸಿಸಿಐ ಆಕ್ಷೇಪ ಎತ್ತಿರುವುದಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ ಸುಪ್ರೀಂ ಕೋರ್ಟ್, ಬಿಸಿಸಿಐಯನ್ನು ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡಿತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಟಿಎಸ್ ಠಾಕೂರ್ ನೇತೃತ್ವದ ನ್ಯಾಯಪೀಠ, ಸಚಿವರನ್ನು ಕ್ರಿಕೆಟ್ ಆಡಳಿತದಿಂದ ದೂರವಿಡುವ ಶಿಫಾರಸನ್ನು ಸಮರ್ಥಿಸಿಕೊಂಡಿತು.
"ರಾಜಕಾರಣಿಗಳು ‘ಅಧಿಕಾರ ಮತ್ತು ಪ್ರಭಾವ’ಕ್ಕಾಗಿ ಇಂಥ ಹುದ್ದೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂದು ನ್ಯಾಯಪೀಠ ಹೇಳಿತು. ಅಲ್ಲದೆ ವರದಿಯನ್ನು ವಿರೋಧಿಸಿರುವ ಕೆಲ ರಾಜ್ಯ ಕ್ರಿಕೆಟ್ ಸಂಸ್ಥೆಗಳನ್ನೂ ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, "ಕಾನೂನಿನ ಮೇಲೆ ‘ದುರಾಕ್ರಮಣ’ ನಡೆಸಲು ಅವಕಾಶ ನೀಡುವುದಿಲ್ಲ. ಸಾಕಷ್ಟು ‘ದುಬಾರಿ’ಯಾಗಿರುವ ಸಮಿತಿಯ ವರದಿ ಜಾರಿಯಲ್ಲಿ ವಿಳಂಬವಾಗುವುದನ್ನು ನ್ಯಾಯಾಲಯ ಸಹಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಇದೇ ವೇಳೆ ‘ಒಂದು ರಾಜ್ಯ, ಒಂದು ಮತ’ ಶಿಫಾರಸು ವಿರೋಧಿಸಿರುವುದನ್ನು ಖಂಡಿಸಿರುವ ನ್ಯಾಯಾಲಯ, ‘ಈ ಕ್ರಿಕೆಟ್ ಸಂಸ್ಥೆಗಳ ವ್ಯಾಪ್ತಿಯನ್ನು ಹಂಚಿದವರು ಯಾರು? ಇಡೀ ದೇಶವೇ ನಮ್ಮ ವ್ಯಾಪ್ತಿ ಎಂದು ನೀವು ನಾಳೆ ಹೇಳುವಂತಿಲ್ಲ’ ಎಂದು ಕಿಡಿಕಾರಿದೆ. ಅಂತೆಯೇ ವಯೋಮಿತಿ ಮೇಲಿನ ನಿರ್ಬಂಧ ಸಡಿಲಿಕೆಗೂ ಒಪ್ಪದ ನ್ಯಾಯಾಲಯ, ‘70ರ ನಂತರ ಕ್ರಿಕೆಟ್ ಆಡಳಿತ ನಡೆಸುವುದಲ್ಲ, ಮನೆಯಲ್ಲಿ ಕುಳಿತು ಟಿವಿಯಲ್ಲಿ ಕ್ರಿಕೆಟ್ ನೋಡುವ ವಯಸ್ಸು ಅದು’ ಎಂದು ಅಭಿಪ್ರಾಯ ಪಟ್ಟಿದೆ.
ಒಟ್ಟಾರೆ ಆರ್ ಎಂ ಲೋಧ ಸಮಿತಿ ಶಿಫಾರಸ್ಸಿನ ಜಾರಿಗೆ ಹಿಂದೇಟು ಹಾಕುತ್ತಿದ್ದ ಬಿಸಿಸಿಐಗೆ ಗುರುವಾರ ಸುಪ್ರೀಂ ಕೋರ್ಟ್ ಸರಿಯಾಗಿಯೇ ಬೆಂಡೆಂತ್ತಿದೆ.