ಕ್ರೀಡೆ

ಆತ್ಮಕತೆ ಬರೆದ ಸಾನಿಯಾ ಮಿರ್ಜಾ; ಜುಲೈನಿಂದ ಮಾರಾಟ

Guruprasad Narayana

ನವದೆಹಲಿ: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ವಿಶ್ವ ಮಹಿಳಾ ಡಬಲ್ಸ್ ನಲ್ಲಿ ನಂಬರ್ ೧ ಪಟ್ಟಕ್ಕೆ ಏರಿದ ಹೋರಾಟವನ್ನು ಮತ್ತಿತರ ತಮ್ಮ ಜೀವನದ ಸಂಗತಿಗಳನ್ನು ಜುಲೈನಲ್ಲಿ ಬಿಡುಗಡೆಯಾಗಲಿರುವ ತಮ್ಮ ಆತ್ಮಕತೆಯಲ್ಲಿ ಬರೆದಿದ್ದಾರೆ.

"ಏಸ್ ಎಗೇನ್ಸ್ಟ್ ಆಡ್ಸ್' ಎಂದು ಕರೆಯಲಾಗಿರುವ ಈ ಆತ್ಮಕತೆಯನ್ನು ಸಾನಿಯಾ ಮಿರ್ಜಾ ತಮ್ಮ ತಂದೆ ಇಮ್ರಾನ್ ಮಿರ್ಜಾ ಅವರೊಂದಿಗೆ ಬರೆದಿದ್ದಾರೆ.

"ಸಾನಿಯಾ ಅವರ ಅಧ್ಭುತ ಸಾಧನೆ ಮತ್ತು ಅವರ ಆತ್ಮಕತೆ ಸ್ಫೂರ್ತಿದಾಯಕ ಮತ್ತು ಆಸಕ್ತಿದಾಯಯಕ. ಅವರ ಪುಸ್ತಕದ ಮೇಲೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ಹೆಮ್ಮೆ" ಎನ್ನುತ್ತಾರೆ ಪುಸ್ತಕದ ಪ್ರಕಾಶಕ ಹಾರ್ಪರ್ ಕಾಲಿನ್ಸ್ ನ ಪ್ರಕಾಶಕಿ ಮತ್ತು ಮುಖ್ಯ ಸಂಪಾದಕಿ ಕಾರ್ತಿಕಾ ವಿ ಕೆ.

೨೯ ವರ್ಷದ ಟೆನಿಸ್ ಆಟಗಾರ್ತಿಯನ್ನು ಭಾರತದ ನಂಬರ್ ೧ ಟೆನಿಸ್ ತಾರೆ ಎಂದು ಮಹಿಳಾ ಟೆನಿಸ್ ಸಂಘ ಘೋಷಿಸಿತ್ತು. "ಭಾರತದ ಮುಂದಿನ ಪೀಳಿಗೆಯ ಟೆನಿಸ್ ಆಟಗಾರಿಗೆ ಈ ಪುಸ್ತಕ ಸಹಕಾರಿಯಾಗಲಿದೆ ಎಂದು ನಂಬಿದ್ದೇನೆ. ಈ ನನ್ನ ಪುಸ್ತಕ ಮುಂದಿನ ಯುವ ಆಟಗಾರರು ವಿಂಬಲ್ಡನ್ ಗೆಲ್ಲಲು ಸ್ಫೂರ್ತಿ ನೀಡಿದರೆ ನಾನು ಧನ್ಯ" ಎಂದಿದ್ದಾರೆ ಸಾನಿಯಾ.

೨೦೧೨ ರಲ್ಲಿ ಸಿಂಗಲ್ಸ್ ಪಂದ್ಯಗಳಿಂದ ನಿವೃತ್ತಿ ಹೊಂದಿದ ಸಾನಿಯಾ, ಆಗಸ್ಟ್ ೨೦೧೫ ಮತ್ತು ಮಾರ್ಚ್ ೨೦೧೬ ರ ನಡುವೆ ಮಾರ್ಟಿನಾ ಹಿಂಗಿಸ್ ಜೊತೆಗೂಡಿ ಸತತ ೪೧ ಪಂದ್ಯಗಳನ್ನು ಗೆದ್ದು ವಿಶ್ವ ಮಹಿಳಾ ಡಬಲ್ಸ್ ನಲ್ಲಿ ನಂಬರ್ ೧ ಪಟ್ಟಕ್ಕೆ ಏರಿದ್ದರು.

ಸಾನಿಯಾ ಪಾಕಿಸ್ತಾನದ ಕ್ರಿಕೆಟ್ ತಾರೆ ಶೋಯೆಬ್ ಮಲಿಕ್ ಅವರನ್ನು ವರಿಸಿದ್ದಾರೆ.

SCROLL FOR NEXT