ತಜಾಮುಲ್ ಇಸ್ಲಾಂ (ಚಿತ್ರ ಎಎನ್ಐ)
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾಲಕಿಯೊಬ್ಬಳು ಇಟಲಿಯಲ್ಲಿ ನಡೆದ ವಿಶ್ವ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾಳೆ.
ಎಂಟು ವರ್ಷದ ಕಾಶ್ಮೀರಿ ಬಾಲೆ ತಜಾಮುಲ್ ಇಸ್ಲಾಂ ಇಟಲಿಯ ಆಂಡ್ರಿಯಾದಲ್ಲಿ ನಡೆದ ವಿಶ್ವ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾಳೆ. 90 ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದ ಈ ಪಂದ್ಯಾವಳಿಯಲ್ಲಿ ತಜಾಮುಲ್ ಅಮೆರಿಕದ ಸ್ಪರ್ಧಿಯನ್ನು ಸೋಲಿಸುವ ಮೂಲಕ ವಿಶ್ವ ಕಿಕ್ ಬಾಕ್ಸಿಂಗ್ ಚಾಂಪಿಯನ್ ಆಗಿದ್ದಾಳೆ. ಸಬ್ ಜೂನಿಯರ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಗೌರವಕ್ಕೆ ಪಾತ್ರವಾಗಿದ್ದಾಳೆ.
ಕೋಚ್ ಮಾಸ್ಟರ್ ಫಾಸಿಲ್ ಅಲಿ ದಾರ್ ಮತ್ತು ಚಾಲಕ ವೃತ್ತಿಯಲ್ಲಿರುವ ಗುಲಾಂ ಮೊಹಮ್ಮದ್ ಲೋನ್ ಅವರ ಪ್ರೋತ್ಸಾಹದಿಂದ ತಜಾಮುಲ್ ಸಾಧನೆ ಮಾಡಿದ್ದಾಳೆ.
ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸಬ್ ಜೂನಿಯರ್ ಕಿಕ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆದ ನಂತರ, ತರಬೇತುದಾರರಿಂದ ಉತ್ತಮ ಕೌಶಲ್ಯ ಪಡೆದುಕೊಂಡಿದ್ದು, ಈಗ ವಿಶ್ವ ಚಾಂಪಿಯನ್ ಆಗಿದ್ದಾಳೆ. ಬಾಂಡೀಪುರ್ ಶಾಲೆಯಲ್ಲಿ 2 ನೇ ತರಗತಿ ಓದುತ್ತಿರುವ ತಜಾಮುಲ್, ಇನ್ನೂ ಸಾಧನೆ ಮಾಡುವ ಹಂಬಲ ವ್ಯಕ್ತಪಡಿಸಿದ್ದಾಳೆ.
2015ರಲ್ಲಿ ನವದೆಹಲಿಯ ತಾಲ್ಕಟೊರಾ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನ ಸಬ್ ಜೂನಿಯರ್ ವಿಭಾಗದಲ್ಲಿ ತಜಮುಲ್ ಚಿನ್ನದ ಪದಕವನ್ನು ಗೆದ್ದಿದ್ದಳು. ಈ ಸಾಧನೆ ಆಕೆಯನ್ನು ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುವಂತೆ ಮಾಡಿತ್ತು.