ಕ್ರೀಡೆ

ಪ್ಯಾರಾಲಿಂಪಿಕ್ಸ್ 2016: ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಚಿನ್ನ ತಂದ ದೇವೇಂದ್ರ ಜಜಾರಿಯಾ

Srinivasamurthy VN

ರಿಯೋ ಡಿ ಜನೈರೋ: ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತೀಯ ಅಥ್ಲೀಟ್ ಗಳ ಪಾರುಪತ್ಯ ಮುಂದುವರೆದಿದ್ದು, ಜಾವಲಿನ್ ಥ್ರೋನಲ್ಲಿ  ದೇವೇಂದ್ರ ಜಜಾರಿಯಾ ಅವರು ಚಿನ್ನದ ಪದಕ ಗಳಿಸಿದ್ದಾರೆ.

ರಿಯೋ ಡಿ ಜನೈರೋದಲ್ಲಿರುವ ಕ್ರೀಡಾಗ್ರಾಮದಲ್ಲಿ ನಡೆದ ಜಾವಲಿನ್ ಥ್ರೋ ಪಂದ್ಯದಲ್ಲಿ ದೇವೇಂದ್ರ ಅವರು, 63.97 ಮೀಟರ್ ದೂರಕ್ಕೆ ಜಾವಲಿನ್ ಎಸೆಯುವ ಮೂಲಕ ಇತಿಹಾಸ  ಬರೆದಿದ್ದಾರೆ. ಆ ಮೂಲಕ ಭಾರತಕ್ಕೆ ಚಿನ್ನದ ಪದಕ ತಂದಿತ್ತಿದ್ದಾರೆ. ಈ ಹಿಂದೆ  2004ರಲ್ಲಿ ಅಥೆನ್ಸ್ ನಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ನಲ್ಲಿ ಇದೇ ದೇವೇಂದ್ರ ಅವರು 62.15 ಮೀಟರ್ ದೂರಕ್ಕೆ  ಜಾವೆಲಿನ್ ಎಸೆದು ದಾಖಲೆ ಬರೆದಿದ್ದರು.

ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿರುವ ದೇವೇಂದ್ರ ಇದೀಗ ತಮ್ಮದೇ ದಾಖಲೆಯನ್ನು ಉತ್ತಮ ಪಡಿಸಿಕೊಂಡಿದ್ದಾರೆ. ಇದೇ ವಿಭಾಗದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಇತರೆ  ಭಾರತೀಯ ಆಟಗಾರರಾದ ರಿಂಕೂ ಹೂಡಾ ಐದನೇ ಸ್ಥಾನಗಳಿಸಿದರು. ದೇವೇಂದ್ರ ಜಜಾರಿಯಾ ಅವರ ಈ ಚಿನ್ನದ ಪದಕದ ಮೂಲಕ ಪದಕ ಪಟ್ಟಿಯಲ್ಲಿ ಭಾರತದ ಪದಕಗಳ ಸಂಖ್ಯೆ  4ಕ್ಕೇರಿದ್ದು, ನಿನ್ನೆ ದೀಪಾ ಮಲ್ಲಿಕ್ ಅವರ ಬೆಳ್ಳಿ ಪದಕ ಸೇರಿದಂತೆ ಭಾರತದ ಬಳಿ ಇದೀಗ 2 ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕಗಳಿವೆ.

SCROLL FOR NEXT