ಹೈದರಾಬಾದ್: ಜಾಹಿರಾತುಗಳಲ್ಲಿ ಕ್ರಿಕೆಟಿಗರನ್ನು ಇತರೆ ಅಥ್ಲೀಟ್ ಗಳು ಹಿಂದಿಕ್ಕಲು ಸಾಧ್ಯವೇ ಇಲ್ಲ ಎಂಬ ಮಾತನ್ನು ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಸುಳ್ಳು ಮಾಡಿದ್ದು, ಗಳಿಕೆಯಲ್ಲಿ ದೇಶದ ಖ್ಯಾತ ಕ್ರಿಕೆಟಿಗರನ್ನೂ ಕೂಡ ಹಿಂದಿಕ್ಕಿದ್ದಾರೆ.
ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ದೇಶದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ್ದ ಪಿವಿ ಸಿಂಧು, ಬಳಿಕ ತಾವು ಮುಟ್ಟಿದ್ದೆಲವನ್ನೂ ಚಿನ್ನವಾಗಿಸಿಕೊಂಡಿದ್ದಾರೆ. ಆ ಮೂಲಕ ಕ್ರಿಕೆಟಿಗರ ಮತ್ತು ಬಾಲಿವುಡ್ ಮಂದಿಯ ಕಪಿಮುಷ್ಟಿಯಲ್ಲಿದ್ದ ಜಾಹಿರಾತು ಕ್ಷೇತ್ರವನ್ನು ಸಿಂಧು ತಮ್ಮ ಮುಷ್ಟಿಗೆ ತೆಗೆದುಕೊಂಡಿದ್ದು, ಇದೀಗ ಜಾಹಿರಾತು ಕ್ಷೇತ್ರದಲ್ಲಿ ತಾರೆಯಾಗಿ ಮಿಂಚುತ್ತಿದ್ದಾರೆ. ಇಂಡಿಯನ್ ಓಪನ್ ಸೂಪರ್ ಸೀರಿಸ್ ಪ್ರಶಸ್ತಿ ಗೆದ್ದು ವಿಶ್ವ ರಾರಯಂಕಿಂಗ್‌ನಲ್ಲಿ 2ನೇ ಶ್ರೇಯಾಂಕ ಕ್ಕೇರುವುದನ್ನು ಖಚಿತಪಡಿಸಿಕೊಂಡ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ಜಾಹೀರಾತು ಕ್ಷೇತ್ರದಲ್ಲಿ ತನ್ನ ಬೇಡಿಕೆಯನ್ನೂ ಗಗನದೆತ್ತರಕ್ಕೆ ವಿಸ್ತರಿಸಿ ಕ್ರಿಕೆಟಿಗ ರವೀಂದ್ರ ಜಡೇಜಾರನ್ನೂ ಹಿಂದಿಕ್ಕಿದ್ದಾರೆ.
ಆ ಮೂಲಕ ಪಿವಿ ಸಿಂಧು ಭಾರತದ ಅತೀ ಹೆಚ್ಚು ಗಳಿಕೆಯ ಮಹಿಳಾ ಅಥ್ಲೀಟ್ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.
ಸದ್ಯ ಪಿವಿ ಸಿಂಧು ಪ್ರತಿ ಬ್ರ್ಯಾಂಡ್ ನ ರಾಯಭಾರಿಯಾಗಲು 2 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಅಂದರೆ ದಿನಕ್ಕೆ 40 ಲಕ್ಷ ರು. ಇರುವ ಅವರ ಶುಲ್ಕ ಮೂಲಗಳ ಪ್ರಕಾರ ದಿನಕ್ಕೆ 80 ಲಕ್ಷದ ವರೆಗೂ ಏರಿಕೆಯಾಗಲಿದೆ. ಆದರೆ, ಜಡೇಜಾ ಅವರ ಜಾಹೀರಾತು ಮೌಲ್ಯದ ದರ ದಿನವೊಂದಕ್ಕೆ 31 ಲಕ್ಷ ರು.ಗಳಷ್ಟೆ. ಆ ಮೂಲಕ ಸಿಂಧು ಗಳಿಕೆಯಲ್ಲಿ ಕ್ರಿಕೆಟಿಗ ರವೀಂದ್ರ ಜಡೇಜಾರನ್ನು ಹಿಂದಿಕ್ಕಿದ್ದು, ಸದ್ಯ ಸಿಂಧು 8 ಸಂಸ್ಥೆಗಳೊಂದಿಗೆ ಜಾಹಿರಾತು ಒಪ್ಪಂದ ಮಾಡಿಕೊಂಡಿದ್ದಾರೆ. ವರ್ಷಾಂತ್ಯಕ್ಕೆ ಈ ಸಂಖ್ಯೆ 17ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.