ನವದೆಹಲಿ: ಏಷ್ಯಾ ನೆಟ್ ಬಾಲ್ ಚಾಂಪಿಯನ್ ಷಿಪ್ ನಲ್ಲಿ ಪ್ರಬಲ ಪಾಕಿಸ್ತಾನ ತಂಡವನ್ನು ಮಣಿಸಿ ಚಿನ್ನ ಗೆದ್ದಿದ್ದ ಭಾರತ ನೆಟ್ ಬಾಲ್ ತಂಡ ಇದೀಗ ದಯನೀಯ ಸ್ಥಿತಿಯಲ್ಲಿದ್ದು, ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುತ್ತಿರುವ ಆಟಗಾರರು ತರಬೇತಿಗೂ ದುಡ್ಡಿಲ್ಲದೇ ಸ್ವಂತ ಖರ್ಚಿನಲ್ಲೇ ತರಬೇತಿ ನಡೆಸುತ್ತಿದ್ದಾರೆ.
ಇತ್ತೀಚೆಗೆಮಲೇಷ್ಯಾದಲ್ಲಿ ಮುಕ್ತಾಯವಾದ ಏಷ್ಯಾ ನೆಟ್ ಬಾಲ್ ಚಾಂಪಿಯನ್ ಷಿಪ್ ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 51-50 ಅಂಕಗಳ ಅಂತದಲ್ಲಿ ಮಣಿಸಿದ್ದ ಭಾರತ ತಂಡ ಪ್ರಶಸ್ತಿಗೆ ಭಾಜನವಾಗಿತ್ತು. ವಿಪರ್ಯಾಸ ಎಂದರೆ ಭಾರತ ನೆಟ್ ಬಾಲ್ ತಂಡದ ಸಾಧನೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗಲೇ ಇಲ್ಲ. ಕೆಲವೇ ಕೆಲ ಪತ್ರಿಕೆಗಳು ಮತ್ತು ಮಾಧ್ಯಮಗಳು ಮಾತ್ರ ಈ ಬಗ್ಗೆ ಸುದ್ದಿ ಪ್ರಕಟಿಸಿದ್ದವಾದರೂ, ತಂಡ ಮನ್ನಣೆ ಗಳಿಸಲು ಇದು ಸಾಕಾಗಲಿಲ್ಲ.
ಇನ್ನು ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವಾಲಯ ಕೇವಲ ಒಂದೇ ಒಂದು ಟ್ವೀಟ್ ಮಾಡಿ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದು ಬಿಟ್ಟರೆ ತಂಡಕ್ಕೆ ಯಾವುದೇ ರೀತಿಯ ಆರ್ಥಿಕ ನೆರವು ಘೋಷಣೆ ಮಾಡಿರಲಿಲ್ಲ.
ಏತನ್ಮಧ್ಯೆ ಮಾಧ್ಯಮಗಳ ನಿರ್ಲಕ್ಷ್ಯಕ್ಕೆ ಗುರಿಯಾಗಿರುವ ನೆಟ್ ಬಾಲ್ ತಂಡ ಸರ್ಕಾರದಿಂದಲೂ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ಕನಿಷ್ಠ ಆಟಗಾರರ ತರಬೇತಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನೂ ಕೂಡ ಸರ್ಕಾರ ನೀಡಿಲ್ಲ. ಏಷ್ಯಾ ನೆಟ್ ಬಾಲ್ ಚಾಂಪಿಯನ್ ಷಿಪ್ ಗೆದ್ದ ಬಳಿಕ ತಂಡದ ತರಬೇತಿಗೆ ಹೊರಾಂಗಣ ಕ್ರೀಡಾಂಗಣದ ಜಾಗವನ್ನು ಬಿಟ್ಟುಕೊಡಲಾಗಿದೆಯಾದರೂ, ನೆಟ್ ಬಾಲ್ ಆಟ ಒಳಾಂಗಣ ಆಟವಾಗಿದ್ದು, ತೀವ್ರ ಚಳಿಯ ನಡುವೆ ಹೊರಗೆ ತರಬೇತಿ ಮಾಡುವುದು ಹೇಗೆ ಎಂದು ಆಟಗಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಂತೆಯೇ ತರಬೇತಿಗಾಗಿ ವಿವಿಧ ಪ್ರದೇಶಗಳಿಗೆ ತೆರಳಬೇಕಾಗುತ್ತದೆ. ಅದರೆ ಇದಕ್ಕೂ ಸರ್ಕಾರದಿಂದ ಹಣ ಬಂದಿಲ್ಲ. ಪ್ರಯಾಣದ ಸಂಪೂರ್ಣ ಖರ್ಚನ್ನು ನಾವೇ ನೋಡಿಕೊಳ್ಳಬೇಕಾಗುತ್ತದೆ ಎಂದು ತಂಡದ ಉಪನಾಯಕ ನಿತಿನ್ ಹೇಳಿಕೊಂಡಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ತಂಡದ ನಾಯಕ ಅಮನ್ ದಹಿಯಾ ಅವರು, ಏಷ್ಯಾ ಕಪ್ ಟೂರ್ನಿ ವೇಳೆ ರೌಂಡ್ ರಾಬಿನ್ ಹಂತದಲ್ಲಿ ನಾವು ಪಾಕಿಸ್ತಾನದ ವಿರುದ್ಧ ಸೋತಿದ್ದೆವು. ಅದೇ ತಂಡದ ವಿರುದ್ಧ ಫೈನಲ್ ನಲ್ಲಿ ನಾವು ಎದುರಾಗಿದ್ದೆವು. ಈ ಪಂದ್ಯ ನಮ್ಮ ಅಳಿವು-ಉಳಿವಿನ ಪಂದ್ಯವಾಗಿತ್ತು. ಈ ಪಂದ್ಯದ ವೇಳೆ ನಮ್ಮ ತಂಡದ ಕೋಚ್ ನಾವು ಚಿನ್ನದ ಪದಕದೊಂದಿಗೇ ಭಾರತಕ್ಕೆ ಮರಳುತ್ತೇವೆ ಎಂದು ಸ್ಪೂರ್ತಿದಾಯಕ ಮಾತುಗಳನ್ನು ಆಡಿದ್ದರು. ಪಾಕಿಸ್ತಾನದ ನೆಟ್ ಬಾಲ್ ಆಟಗಾರರು ದೈಹಿಕವಾಗಿ ಬಲಾಢ್ಯರು. ಅಂತೆಯೇ ಪ್ರಬಲ ಆಟಗಾರರೂ ಕೂಡ. ಫೈನಲ್ ನಲ್ಲಿ ಇವರ ವಿರುದ್ಧ ಗೆಲ್ಲುವುದು ನಮಗೆ ಕನಸಿನ ಮಾತಾಗಿತ್ತು. ಆದರೆ ನಮ್ಮ ಕಠಿಣ ಅಭ್ಯಾಸ ಪರಿಶ್ರಮ ನಾವು ಪ್ರಶಸ್ತಿ ಗೆಲ್ಲುವಂತೆ ಮಾಡಿತು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics