ನವದೆಹಲಿ: ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ವಿವಿ ಸಿಂಧು ದೆಹಲಿಯಲ್ಲಿ ನಡೆದ ಇಂಡಿಯಾ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಶುಕ್ರವಾರ ಭಾರತದ ಮತ್ತೋರ್ವ ಸ್ಟಾರ್ ಷಟ್ಲರ್ ಸೈನಾ ನೆಹ್ವಾಲ್ ವಿರುದ್ಧ ಜಯ ದಾಖಲಿಸಿದ್ದಾರೆ.
ಸಾಕಷ್ಟು ಕುತೂಹಲ ಹುಟ್ಟಿಸಿದ್ದ ಈ ಪಂದ್ಯದಲ್ಲಿ ಸೈನಾ ಮತ್ತು ಪಿವಿ ಸಿಂಧು ನಡುವೆ ಜಯಕ್ಕಾಗಿ ತೀವ್ರ ಹಗ್ಗ-ಜಗ್ಗಾಟ ನಡೆದಿತ್ತು. ಸುಮಾರು 47 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಪಿವಿ ಸಿಂಧು ಸೈನಾ ನೆಹ್ವಾಲ್ ವಿರುದ್ಧ 21-16, 22-20 ನೇರ ಸೆಟ್ ಗಳ ಅಂತರದಿಂದ ಮಣಿಸಿದರು. ಆ ಮೂಲಕ ಟೂರ್ನಿ ಸೆಮಿ ಫೈನಲ್ ಹಂತಕ್ಕೆ ಪಿವಿ ಸಿಂಧು ಪ್ರವೇಶ ಪಡೆದಿದ್ದು, ಇಂದು ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಸಿಂಧು ಕೊರಿಯಾದ ಸಂಗ್ ಜಿ ಹ್ಯೂನ್ರನ್ನು ಎದುರಿಸಲಿದ್ದಾರೆ.
ಇದಕ್ಕೂ ಮೊದಲು ಕೊನೆಯ ಬಾರಿಗೆ 2014ರ ಸಯ್ಯದ್ ಮೋದಿ ಇಂಟರ್ನ್ಯಾಷನಲ್ ಟೂರ್ನಿಯಲ್ಲಿ ಎದುರಾಗಿದ್ದ ಪಂದ್ಯದಲ್ಲಿ ಸೈನಾ ನೇರ ಗೇಮ್ಳಿಂದ ಸಿಂಧುರನ್ನು ಮಣಿಸಿದ್ದರು. ಸುಮಾರು 3 ವರ್ಷಗಳ ಬಳಿಕ ಸಿಂಧು ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ ಸೇಡು ತೀರಿಸಿಕೊಂಡರು. ಪಂದ್ಯದ ಬಳಿಕ ಮಾತನಾಡಿದ ಪಿವಿ ಸಿಂಧು, "ಇದೊಂದು ಉತ್ತಮ ಪಂದ್ಯವಾಗಿತ್ತು. ಸೈನಾ ಆರಂಭದಲ್ಲಿ ಮುನ್ನಡೆ ಸಾಧಿಸುತ್ತಿದ್ದು, ನನ್ನ ಆಟದ ಮೇಲೆ ನನಗೆ ನಂಬಿಕೆ ಇದ್ದ ಹಿನ್ನೆಲೆಯಲ್ಲಿ ಪುಟಿದೆದ್ದೆ. 2ನೇ ಗೇಮ್ ನಲ್ಲಿ ಸೈನಾ 20-19 ರಿಂದ ಮುನ್ನಡೆಯಲ್ಲಿದ್ದರೂ ಆತ್ಮವಿಶ್ವಾಸದಿಂದ ಆಡಿದೆ ಎಂದು ಹೇಳಿದರು.