ಕ್ರೀಡೆ

ಇಂಡಿ 500 ರೇಸ್ ವೇಳೆ ಭೀಕರ ಅಪಘಾತ: ಚಾಲಕ ಡಿಕ್ಸನ್ ಪವಾಡ ಸದೃಶ ಪಾರು!

Srinivasamurthy VN

ಇಂಡಿಯಾನಾಪೊಲಿಸ್: ಪ್ರತಿಷ್ಠಿತ ಇಂಡಿ500 ರೇಸ್ ಭಾನುವಾರ ಭೀಕರ ಅಪಘಾತವೊಂದಕ್ಕೆ ಸಾಕ್ಷಿಯಾಗಿದ್ದು, ನ್ಯೂಜಿಲೆಂಡ್ ಮೂಲದ ಚಾಲಕ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ.

ಇಂಡಿಯಾನಾಪೊಲಿಸ್ 500 ರೇಸ್ ಅಥವಾ ಇಂಡಿ 500 ಎಂದೇ ಖ್ಯಾತಿ ಗಳಿಸಿರುವ ಓವಲ್ ರೇಸ್ ನಲ್ಲಿ ನ್ಯೂಜಿಲೆಂಡ್ ಮೂಲದ ಚಾಲಕ ಸ್ಕಾಟ್ ಡಿಕ್ಸನ್ ಕಾರು ಅಫಘಾತಕ್ಕೀಡಾಗಿದ್ದು, ಅಪಘಾತದ ರಭಸಕ್ಕೆ ಇಡೀ ಕಾರು  ಚಿಂದಿಯಾಗಿದೆ. ಪಂದ್ಯದ 53ನೇ ಲ್ಯಾಪ್ ವೇಳೆ ಡಿಕ್ಸನ್ ತಮ್ಮ ಎದುರಿಗಿದ್ದ ಬ್ರಿಟೀಷ್ ಚಾಲಕ ಜೇ ಹೋವರ್ಡ್ ಅವರನ್ನು ಹಿಂದಿಕ್ಕಲು ಯತ್ನಿಸುತ್ತಿದ್ದಾಗ ಕಾರು ಆಕಸ್ಮಿಕವಾಗಿ ಪರಸ್ಪರ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ  ಕಾರು ಆಗಸಕ್ಕೆ ಚಿಮ್ಮಿದ್ದು, ಆಗಸದಲ್ಲೇ ಮೂರು ಸುತ್ತು ಗಿರಕಿ ಹೊಡೆದು ಪಕ್ಕದಲ್ಲಿದ್ದ ರಕ್ಷಣಾ ತಡೆಗೋಡೆ ಮೇಲೆ ಬಿದ್ದಿದೆ. ಈ ವೇಳೆ ಕಾರಿನ ಬಹುತೇಕ ಭಾಗಗಳು ತಿಂದಿಯಾಗಿದೆ.

ಈ ಭೀಕರ ಅಪಘಾತದಲ್ಲಿ ಕಾರು ಚಾಲಕ ಡಿಕ್ಸನ್ ಗಂಭೀರರಾಗಿರಬಹುದು ಎಂದೇ ಎಲ್ಲರೂ ಎಣಿಸಿದ್ದರು. ಆದರೆ ಕೂಡಲೇ ಸ್ಥಳಕ್ಕಾಗಮಿಸಿದ ಆ್ಯಂಬುಲೆನ್ಸ್ ಹಾಗೂ ರಕ್ಷಣಾ ಸಿಬ್ಬಂದಿಗಳು ಡಿಕ್ಸನ್ ರನ್ನು ಹೊರೆಗೆಳೆದಿದ್ದಾರೆ.  ಅದೃಷ್ಟವಶಾತ್ ಡಿಕ್ಸನ್ ಸಣ್ಣ ಪುಟ್ಟಗಾಯಗಳಿಂದ ಬಚಾವ್ ಆಗಿದ್ದಾರೆ. ಕಾರಿನ ಚಾರ್ಸಿ ಗಂಭೀರವಾಗಿ ಹಾನಿಯಾಗಿದ್ದು, ಎರಡು ಭಾಗವಾಗಿ ಛಿದ್ರವಾಗಿತ್ತು. ಆದರೂ ಡಿಕ್ಸನ್ ಪಾರಾಗಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು.  ಕಾರಿನಲ್ಲಿದ್ದ ರಕ್ಷಣಾ ವ್ಯವಸ್ಥೆಯಿಂದಾಗಿ ಡಿಕ್ಸನ್ ಬಚಾವ್ ಆಗಿದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಪಘಾತ ಪರಿಣಾಮ ಡಿಕ್ಸನ್ ಹಾಗೂ ಜೇ ಹೊವರ್ಡ್ ರೇಸ್ ನಿಂದ ಹೊರಗುಳಿಯಬೇಕಾಯಿತು. ಸ್ಟಾಕ್ ಡಿಕ್ಸನ್ 2008ರಲ್ಲಿ ಚಾಂಪಿಯನ್ ಆಗಿದ್ದರು. ಈ ಭೀಕರ ಅಫಘಾತದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇಂಡಿ500 ರೇಸ್ ಗಾಗಿ ಮೊನಾಕೋ ಗ್ರಾಂಡ್ ಪ್ರಿಕ್ಸ್ ತೊರೆದಿದ್ದ ಆಲಾನ್ಸೋಗೆ ಸೋಲು
SCROLL FOR NEXT