ದೇಶದಲ್ಲೇ ಮೊದಲ ಬಾರಿಗೆ ತಮಿಳು ಭಾಷೆಯಲ್ಲಿ ಕ್ರೀಡಾವಾಹಿನಿ!
ದೇಶದಲ್ಲೇ ಮೊದಲ ಬಾರಿಗೆ ಸ್ಥಳೀಯ ಭಾಷೆಯೊಂದರಲ್ಲಿ ಕ್ರೀಡಾವಾಹಿನಿಯೊಂದು ತಲೆ ಎತ್ತಿದ್ದು, ಖ್ಯಾತ ಕ್ರೀಡಾವಾಹಿನಿ ಸಮೂಹ ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ ತಮಿಳು ಭಾಷೆಯಲ್ಲಿ ಕ್ರೀಡಾ ವಾಹಿನಿಯನ್ನು ಆರಂಭಿಸಿದೆ.
ಚೆನ್ನೈ: ದೇಶದಲ್ಲೇ ಮೊದಲ ಬಾರಿಗೆ ಸ್ಥಳೀಯ ಭಾಷೆಯೊಂದರಲ್ಲಿ ಕ್ರೀಡಾವಾಹಿನಿಯೊಂದು ತಲೆ ಎತ್ತಿದ್ದು, ಖ್ಯಾತ ಕ್ರೀಡಾವಾಹಿನಿ ಸಮೂಹ ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ ತಮಿಳು ಭಾಷೆಯಲ್ಲಿ ಕ್ರೀಡಾ ವಾಹಿನಿಯನ್ನು ಆರಂಭಿಸಿದೆ.
ತಮಿಳು ಭಾಷಿಕರ ಅಪಾರ ಪ್ರಾಂತೀಯ ಮನೋಭಾವ ಹಾಗೂ ಭಾಷೆಯ ಮೇಲಿನ ಅಭಿಮಾನದಿಂದಾಗಿಯೇ ತಮಿಳಿನಲ್ಲಿ ಕ್ರೀಡಾವಾಹಿನಿ ತೆರೆಯುತ್ತಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಈ ನೂತನ ವಾಹಿನಿಗೆ ಸ್ಟಾರ್ ಸ್ಪೋರ್ಟ್ಸ್ ತಮಿಳ್ ಎಂದು ಹೆಸರಿಡಲಾಗಿದ್ದು, ಭಾರತದಲ್ಲೇ ಮೊದಲ ಪ್ರಾದೇಶಿಕ ಭಾಷೆಯ ಮೊದಲ ಕ್ರೀಡಾವಾಹಿನಿ ಎಂಬ ಕೀರ್ತಿಗೆ ಈ ವಾಹಿನಿ ಪಾತ್ರವಾಗಿದೆ.
ಸ್ಟಾರ್ ಸ್ಪೋರ್ಟ್ಸ್ ಈಗಾಗಲೇ ಹಿಂದಿ ಭಾಷೆಯಲ್ಲಿ ಪ್ರಸಾರವಾಗುತ್ತಿದೆಯಾದರೂ ಸಂಪೂರ್ಣವಾಗಿ ಪ್ರಾದೇಶಿಕ ಭಾಷೆಯಲ್ಲಿ ವಾಹಿನಿ ಅಸ್ತಿತ್ವಕ್ಕೆ ಬಂದಿರುವುದು ಮತ್ತು ಸ್ಥಳೀಯ ಭಾಷೆಯಲ್ಲೇ ಕಾರ್ಯಕ್ರಮ ಪ್ರಸಾರವಾಗುತ್ತಿರುವದು ಇದೇ ಮೊದಲ ಬಾರಿಯಾಗಿದೆ. ತಮಿಳು ಭಾಷಿಕರ ಸಂಖ್ಯೆ, ಅದರ ಪ್ರಭಾವ, ಅಲ್ಲಿನ ಸಂಸ್ಕೃತಿ ಇವೆಲ್ಲವನ್ನೂ ಗಮನಿಸಿಯೇ ಸಂಸ್ಥೆ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
ತಮಿಳಿನಲ್ಲೇ ಸಂದರ್ಶನ ನೀಡಲಿದ್ದಾರೆ ಆರ್ ಅಶ್ವಿನ್, ಧೋನಿ
ಇನ್ನು ಸ್ಚಾರ್ ಸ್ಪೋರ್ಟ್ಸ್ ತಮಿಳು ವಾಹಿನಿಯಲ್ಲಿ ಖ್ಯಾತ ಕ್ರಿಕೆಟಿಗ ಆರ್ ಅಶ್ವಿನ್ ಸಂದರ್ಶನ ನೀಡಿದ್ದು, ತಮಿಳಿಗರಾದ ಅವರು ತಮಿಳು ಭಾಷೆಯಲ್ಲೇ ಸಂದರ್ಶನ ನೀಡಿರುವುದು ವಿಶೇಷ. ಅಲ್ಲದೆ ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ದ ಖ್ಯಾತ ಕ್ರಿಕೆಟಿಗ ಎಂಎಸ್ ಧೋನಿ ಕೂಡ ಸಂದರ್ಶನ ನೀಡಿದ್ದು, ಇದಲ್ಲದೆ ಚೆನ್ನೈಯಿನ್ ಫುಟ್ ಬಾಲ್ ಕ್ಲಬ್ ಆಟಗಾರರು, ಹಾಗೂ ಇತರೆ ಸ್ಥಳೀಯ ಕ್ರೀಡಾಪಟುಗಳು ವಾಹಿನಿಯ ವಿಶೇಷ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.
ಇದಲ್ಲದೇ ಸ್ಥಳೀಯ ಕ್ರೀಡೆಗಳನ್ನು ಕೂಡ ಪ್ರೋತ್ರಾಹಿಸುವುದು ವಾಹಿನಿ ಉದ್ದೇಶವಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.