ಜಕಾರ್ತ: ಭಾರತದ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಮತ್ತು ಪಿವಿ ಸಿಂಧು, ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಭಾನುವಾರ ಜಕಾರ್ತದ ಜಿಬಿಕೆ ಅಂಗಳದಲ್ಲಿ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿರುವ ಸೈನಾ 21–18, 21–16ರ ನೇರ ಸೆಟ್ ಗಳಿಂದ ಥಾಯ್ಲೆಂಡ್‌ನ ರಚನೊಕ್ ಇಂಟನಾನ್ ಎದುರು ಗೆದ್ದರು. ಒಟ್ಟು 42 ನಿಮಿಷಗಳ ಹೋರಾಟದಲ್ಲಿ ಸೈನಾ ನೆಹ್ವಾಲ್ ಪ್ರಾಬಲ್ಯ ಮೆರೆದರು. ಎರಡು ಗೇಮ್ ಗಳಲ್ಲೂ ಅಬ್ಬರದ ಆಟ ಆಡಿ ಗಮನ ಸೆಳೆದರು.
ಎಂಟರ ಘಟ್ಟದ ಇನ್ನೊಂದು ಹಣಾಹಣಿಯಲ್ಲಿ ಪಿವಿ ಸಿಂಧು 21–11, 16–21, 21–14ರಲ್ಲಿ ಥಾಯ್ಲೆಂಡ್ ನ ನಿಚಾವೊನ್ ಜಿಂದಾಪಾಲ್ ಅವರನ್ನು ಸೋಲಿಸಿದರು. 17 ನಿಮಿಷಗಳ ಮೊದಲ ಗೇಮ್ ನಲ್ಲಿ ಸಿಂಧು ಮಿಂಚಿನ ಆಟ ಆಡಿ ಎದುರಾಳಿಯನ್ನು ಕಂಗೆಡಿಸಿದರು. ಎರಡನೇ ಗೇಮ್ ನಲ್ಲಿ ಜಿಂದಾಪೊಲ್ ತಿರುಗೇಟು ನೀಡಿ 1–1ರಲ್ಲಿ ಸಮಬಲ ಮಾಡಿಕೊಂಡರು. ಮೂರನೇ ಗೇಮ್ ನಲ್ಲಿ ಸಿಂಧು ಅಮೋಘ ಆಟ ಆಡಿ ಜಯಗಳಿಸಿದರು.