ಬೆಲ್ಜಿಯಂ ವಿರುದ್ಧ ಭಾರತಕ್ಕೆ 0-2 ಗೋಲುಗಳ ಸೋಲು
ತೌರಂಗ (ನ್ಯೂಜಿಲೆಂಡ್): ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ನಾಲ್ಕು ರಾಷ್ಟ್ರಗಳ ಇನ್ವಿಟೇಷನಲ್ ಹಾಕಿ ಪಂದ್ಯಾವಳಿಯಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಭಾರತ, ಬೆಲ್ಜಿಯಂ ವಿರುದ್ಧ ಪರಾಭವಗೊಂಡಿದೆ.
ನಿನ್ನೆ ನಡೆದ ಪಂದ್ಯದಲ್ಲಿ ಜಪಾನ್ ವಿರುದ್ಧ 6-0 ಅಂತರದ ಭರ್ಜರಿ ಗೆಲುವು ಸಾಧಿಸಿದ್ದ ಭಾರತ ಇಂದಿನ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ 0-2 ಅಂತರದ ಸೋಲು ಕಂಡಿದೆ.ತನ್ನ ಮೊದಲ ಪಂದ್ಯದಲ್ಲಿ ಅತಿಥೇಯ ನ್ಯೂಜಿಲೆಡ್ ವಿರುದ್ಧ 4-5 ಅಂತರದ ಸೋಲನ್ನನುಭವಿಸಿದ್ದ ಬೆಲ್ಜಿಯಂ, ಭಾರತದ ವಿರುದ್ಧ ಪ್ರದರ್ಶನದಲ್ಲಿ ಉತ್ತಮ ಸಾಧನೆ ಮಾಡಿದೆ.
ಇಂದಿನ ಪಂದ್ಯದಲ್ಲಿ ಬೆಲ್ಜಿಯಂ ಪರವಾಗಿ ಅರ್ಥುರ್ ಡೆ ಸ್ಲೂವರ್ ಹಾಗೂ ವಿಕ್ಟರ್ ವೆಗ್ನೆಝ್ ಕ್ರಮವಾಗಿ 8 ಹಾಗೂ 34ನೇ ನಿಮಿಷದಲ್ಲಿ ಗೋಲು ದಾಖಲಿಸಿದ್ದರು. ಇನ್ನು ಭಾರತ್ದ ಆಟಗಾರರು ಸಾಕಷ್ಟು ಹೋರಾಟ ನೀಡಿದರೂ ಎದುರಾಳಿಗಳ ಭದ್ರತಾ ಕೋಟೆಯನ್ನು ಭೇದಿಸಲಾಗದೆ ಪರಾಭವ ಅನುಭವಿಸಿದರು.