ಭಾರತ-ಕೊರಿಯಾ ಹಾಕಿ ಸರಣಿ: 4ನೇ ಪಂದ್ಯದಲ್ಲಿ ಭಾರತಕ್ಕೆ ಜಯ
ಸಿಯೋಲ್(ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ಭಾರತ-ದಕ್ಷಿಣ ಕೊರಿಯಾ ಮಹಿಳಾ ಹಾಕಿ ಪಂದ್ಯಾವಳಿಯಲ್ಲಿ ಭಾರತ ತಂಡವು 3-1 ಅಂತರದ ಜಯ ಸಾಧಿಸಿದೆ. ಒಟ್ಟು ಐದು ಪಂದ್ಯಗಳ ಸರಣಿಯಲ್ಲಿ ಇದು ನಾಲ್ಕನೇ ಪಂದ್ಯವಾಗಿದ್ದು ಭಾರತ 3-1 ಅಂತರದಿಂಡ ಸರಣಿ ಕೈವಶ ಮಾಡಿಕೊಂಡಿದೆ.
ಜಿನ್‌ಚನ್ ಅಥ್ಲೇಟಿಕ್ ಸೆಂಟರ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಅಮೋಘ ಆಟ ಹಾಗೂ ಸಮರ್ಥ ನಿರ್ವಹಣೆಯ ಕಾರಣ ಅತಿಥೇಯರ ವಿರುದ್ಧ ಭರ್ಜರಿ ಜಯ ದಾಖಲಿಸಿದೆ.
ಭಾರತದ ಗುರ್ಜಿತ್ ಕೌರ್ (2ನೇ ನಿಮಿಷ), ದೀಪಿಕಾ (14ನೇ ನಿಮಿಷ) ಹಾಗೂ ಪೂನಂ ರಾಣಿ (47ನೇ ನಿಮಿಷ) ತಮ್ಮ ಗೋಲುಗಳನ್ನು ಗಳಿಸಿ ತಂಡದ ಗೆಲುವಿಗೆ ಕಾರಣಕರ್ತರಾದರು.
ಇನ್ನು ಕೊರಿಯಾ ಪರವಾಗಿ ಮಿ ಹ್ಯುನ್ ಪಾರ್ಕ್ ಪಂದ್ಯದ ಐವತ್ತೇಳನೇ ನಿಮಿಷದಲ್ಲಿ ಗೋಲು ಗಳಿಸಿದ್ದು ತಂಡದ ಸೋಲಿನ ಅಂತರ ತಗ್ಗಿಸಲು ನೆರವಾದರು.
ಸರಣಿಯ ಕೊನೆಯ ಪಂದ್ಯವು ಭಾನುವಾರ (ಮಾ.11)ರಂದು ನಡೆಯಲಿದೆ.