ಕ್ರೀಡೆ

'ವಾಡಾ'ದಿಂದ ಮಾನ್ಯತೆ ರದ್ದತಿಯಾಗಲು 'ನಾಡಾ'ದ ತಪ್ಪುಗಳೇ ಕಾರಣ: ಒಲಂಪಿಕ್ ಅಸೋಸಿಯೇಷನ್ 

Sumana Upadhyaya

ನವದೆಹಲಿ: ವಾಡಾದಿಂದ ಮಾನ್ಯತೆ ಪಡೆದ ಒಂದೇ ಒಂದು ಪ್ರಯೋಗಾಲಯವಾದ ರಾಷ್ಟ್ರೀಯ ಉದ್ದೀಪನ ಮದ್ದು ವಿರೋಧಿ ಸಂಸ್ಥೆಯ(ನಾಡಾ) ತಪ್ಪುಗಳಿಂದಲೇ ಅದರ ಮಾನ್ಯತೆ ರದ್ದಾಗಿದೆ ಎಂದು ರಾಷ್ಟ್ರೀಯ ಒಲಂಪಿಕ್ ಸಂಸ್ಥೆ ಆರೋಪಿಸಿದೆ.


ಈ ಕುರಿತು ಇಂದು ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ ಭಾರತೀಯ ಒಲಂಪಿಕ್ ಸಂಘದ ಅಧ್ಯಕ್ಷ ನರೀಂದರ್ ಭಾತ್ರಾ, ಇನ್ನು ನಾವು ರೂಪಾಯಿ ಬದಲಿಗೆ ಡಾಲರ್ ಗಳಲ್ಲಿ ಖರ್ಚು ಮಾಡಬೇಕು, ಪರೀಕ್ಷೆಗೆ ಹೆಚ್ಚುವರಿ ಹಣವನ್ನು ಯಾರು ಭರಿಸುವುದು ಎಂಬುದೇ ನನ್ನ ಆತಂಕವಾಗಿದೆ ಎಂದರು.


ರಾಷ್ಟ್ರೀಯ ಕ್ರೀಡಾ ಒಕ್ಕೂಟ ಹೆಚ್ಚುವರಿ ಹಣವನ್ನು ಭರಿಸುವ ಪರಿಸ್ಥಿತಿಯಲ್ಲಿಲ್ಲ, ನಾಡಾ ಮಾಡಿರುವ ತಪ್ಪಿಗೆ ನಾವೇಕೆ ಹೆಚ್ಚುವರಿ ಹಣ ತೆರಬೇಕು ಎಂದು ಕೇಳಿದರು.


ವಾಡಾ ಪದೇ ಪದೇ ಎಚ್ಚರಿಕೆ ನೀಡಿದ್ದರೂ ಸಹ ನಾಡಾ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ನಿರ್ಲಕ್ಷ್ಯ ಮಾಡಿತು. ಕಳೆದೊಂದು ವರ್ಷದಿಂದ ಆಂತರಿಕವಾಗಿ ಹೀಗೆಯೇ ಆಗುತ್ತಿತ್ತು. ವಾಡಾ ಸಂಸ್ಥೆಯು ನಾಡಾದಲ್ಲಿನ ಪರೀಕ್ಷಾ ವಿಧಾನದಲ್ಲಿನ ತಪ್ಪುಗಳನ್ನು ಹೇಳುತ್ತಲೇ ಬಂದಿತ್ತು. ಆದರೆ ಅದನ್ನು ನಿಭಾಯಿಸುವಲ್ಲಿ ನಾಡಾ ವಿಫಲವಾಗಿದೆ ಎಂದರು.


ದೆಹಲಿಯಲ್ಲಿರುವ ರಾಷ್ಟ್ರೀಯ ಉದ್ದೀಪನ ಮದ್ದು ವಿರೋಧಿ ಸಂಸ್ಥೆಗೆ ವಾಡಾದಿಂದ 2008ರಲ್ಲಿ ಮಾನ್ಯತೆ ಸಿಕ್ಕಿತ್ತು. ನಾಡಾ ಮುಂದಿನ 21 ದಿನಗಳಲ್ಲಿ ರದ್ದತಿಯನ್ನು ಪ್ರಶ್ನಿಸಿ ಮನವಿ ಸಲ್ಲಿಸಬಹುದು. ನಾಡಾದಲ್ಲಿ ರಕ್ತದ ಮತ್ತು ಮೂತ್ರದ ಮಾದರಿಯನ್ನು ತೆಗೆದುಕೊಳ್ಳಬಹುದು, ಆದರೆ ಪರೀಕ್ಷೆ ಮಾಡಬೇಕೆಂದರೆ ಭಾರತದಿಂದ ಹೊರಗಿನ ವಾಡಾ ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿಯೇ ಮಾಡಿಸಿಕೊಳ್ಳಬೇಕಾಗುತ್ತದೆ. 


ನಾಡಾ ಮಹಾ ನಿರ್ದೇಶಕ ನವೀನ್ ಅಗರ್ವಾಲ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ಅವರು ಪ್ರತಿಕ್ರಿಯೆಗೆ ಸಿಗಲಿಲ್ಲ.

SCROLL FOR NEXT