ಕ್ರೀಡೆ

ರಾಷ್ಟ್ರೀಯ ಉದ್ದೀಪನ ಪರೀಕ್ಷಾ ಪ್ರಯೋಗಾಲಯ ಮಾನ್ಯತೆ 6 ತಿಂಗಳಿಗೆ ರದ್ದುಗೊಳಿಸಿದ ವಾಡಾ

Sumana Upadhyaya

ನವದೆಹಲಿ: ಉದ್ದೀಪನ ಮದ್ದು ಸೇವನೆ ವಿರೋಧಿ ಸಂಸ್ಥೆಯಾದ ವರ್ಲ್ಡ್ ಆ್ಯಂಟಿ ಡೋಪಿಂಗ್ ಏಜೆನ್ಸಿ (ವಾಡಾ)ರಾಷ್ಟ್ರೀಯ ಉದ್ದೀಪನ ಪರೀಕ್ಷಾ ಪ್ರಯೋಗಾಲಯದ(ಎನ್ ಡಿಟಿಎಲ್) ಮಾನ್ಯತೆಯನ್ನು ಆರು ತಿಂಗಳವರೆಗೆ ರದ್ದುಗೊಳಿಸಿದೆ. 


ಈ ಅಮಾನತಿನ ಸಮಯದಲ್ಲಿ ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ಸಂಸ್ಥೆಯು ತನಗೆ ಉದ್ದೀಪನ ಸೇವನೆಯ ಆರೋಪ ಬಂದರೆ ವ್ಯಕ್ತಿಯ ರಕ್ತ ಮತ್ತು ಮೂತ್ರದ ಮಾದರಿಯನ್ನು ಸಂಗ್ರಹಿಸಬಹುದೆ ಹೊರತು ಪರೀಕ್ಷೆ ಮಾಡುವಂತಿಲ್ಲ. ಅಮಾನತಿನ ಸಮಯದಲ್ಲಿ ಭಾರತದಿಂದ ಹೊರಗೆ ವಾಡಾದಿಂದ ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿಯೇ ಪರೀಕ್ಷೆ ನಡೆಸಬೇಕಾಗುತ್ತದೆ. 


ವಾಡಾದ ಅಧಿಕಾರಿಗಳು ಪರಿಶೀಲನೆ ನಡೆಸಲು ಬಂದಿದ್ದ ಸಂದರ್ಭದಲ್ಲಿ ಪ್ರಯೋಗಶಾಲೆಯು ಅಂತಾರಾಷ್ಟ್ರೀಯ ಗುಣಮಟ್ಟದ ಪ್ರಯೋಗಾಲಯಗಳ ಗುಣಮಟ್ಟ ಹೊಂದಿಲ್ಲ ಎಂದು ಕಂಡುಬಂದ ಹಿನ್ನಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ ಎಂದು ವಾಡಾ ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ.


ವಾಡಾ ಮಾನ್ಯತೆ ಪ್ರಯೋಗಾಲಯಗಳ ಸ್ಥಿತಿಗತಿ ಕುರಿತು ಅದರ ಪ್ರಯೋಗಾಲಯ ತಜ್ಞರ ಗುಂಪು ಶಿಸ್ತುಕ್ರಮಕ್ಕೆ ಮುಂದಾಗಿದೆ ಎಂದು ವಾಡಾ ಹೇಳಿದೆ.


ಅಮಾನತು ಆದೇಶ ಹೊರಬಿದ್ದ ಕೂಡಲೇ ಎನ್ ಡಿಟಿಎಲ್ ಗೆ ಎಲ್ಲಾ ರೀತಿಯ ಪರೀಕ್ಷಾ ವಿಧಾನಗಳನ್ನು ಕೂಡಲೇ ನಿಲ್ಲಿಸುವಂತೆ ಮತ್ತು ಮಾನ್ಯತೆ ಪಡೆದ ದೇಶದ ಹೊರಗಿನ ಪ್ರಯೋಗಾಲಯಗಳಿಗೆ ಸುರಕ್ಷಿತವಾಗಿ ಮಾದರಿಗಳನ್ನು ಕಳುಹಿಸುವಂತೆ ಸೂಚನೆ ನೀಡಲಾಗಿದೆ. ಈ ಆದೇಶ ಮೊನ್ನೆ ಆಗಸ್ಟ್ 20ರಿಂದ 6 ತಿಂಗಳವರೆಗೆ ಜಾರಿಯಲ್ಲಿರುತ್ತದೆ. 

SCROLL FOR NEXT