ಕ್ರೀಡೆ

ಬಿಡಬ್ಲ್ಯೂಎಫ್ ರ್ಯಾಂಕಿಂಗ್: ವೃತ್ತಿಜೀವನದ ಶ್ರೇಷ್ಠ ಶ್ರೇಯಾಂಕ ಪಡೆದ ಲಕ್ಷ್ಯೆ ಸೇನ್, ಪಿವಿ ಸಿಂಧುಗೆ 6ನೇ ಸ್ಥಾನ

Raghavendra Adiga

ಕೌಲಾಲಾಂಪುರ್: ಕಳೆದ ಭಾನುವಾರ ಬಾಂಗ್ಲಾದೇಶ ಇಂಟರ್‌ನ್ಯಾಷನಲ್ ಚಾಲೆಂಜ್ ಗೆದ್ದ ಭಾರತದ ಯುವ ಆಟಗಾರ ಲಕ್ಷ್ಯ ಸೇನ್ ಅವರು ವೃತ್ತಿ ಜೀವನದ ಬಿಡಬ್ಲ್ಯುಎಫ್ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ಶ್ರೇಷ್ಠ ಸ್ಥಾನ ಪಡೆದಿದ್ದಾರೆ.

ಮಂಗವಾರ ಬಿಡುಗಡೆಯಾಗಿರುವ ಶ್ರೇಯಾಂಕದಲ್ಲಿ ಭಾರತದ ಯುವ ಆಟಗಾರ 9 ಸ್ಥಾನಗಳಲ್ಲಿ ಏರಿಕೆ ಕಂಡು 32ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಬಾಂಗ್ಲಾದೇಶ ಚಾಲೆಂಜ್ ಗೆಲ್ಲುವುದಕ್ಕೂ ಮುನ್ನ ಸೇನ್‌, ಕಳೆದ ಸೆಪ್ಟೆಂಬರ್‌ನಲ್ಲಿ ಬೆಲ್ಜಿಯಂ ಇಂಟ್‌ನ್ಯಾಷನಲ್‌ ಗೆದ್ದಿದ್ದರು. ನಂತರ, ಡಚ್‌ ಓಪನ್ ಹಾಗೂ ಸಾರ್‌ಲೊರ್ ಲಕ್ಸ್ ಸೂಪರ್‌ ಟೂರ್ನಿಗಳಲ್ಲೂ ಚಾಂಪಿಯನ್‌ ಆಗಿದ್ದರು. ನವೆಂಬರ್‌ನಲ್ಲಿ ಸ್ಕಾಟೀಷ್‌ ಓಪನ್‌ ಕೂಡ ಮುಡಿಗೇರಿಸಿಕೊಂಡಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ ಭಾರತದ ಆಟಗಾರ ಐದು ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.

ಕಳೆದ ಭಾನುವಾರ ಢಾಕದಲ್ಲಿ ಬಾಂಗ್ಲಾದೇಶ ಇಂಟರ್‌ನ್ಯಾಷನಲ್ ಚಾಲೆಂಜ್‌ ಫೈನಲ್‌ ಹಣಾಹಣಿಯಲ್ಲಿ ಮಲೇಷ್ಯಾದ ಲಿಯಾಮಗ್ ಜುನ್‌ ಹವೊ ವಿರುದ್ಧ 22-20, 21-19 ಅಂತರದಲ್ಲಿ ಜಯ ಸಾಧಿಸಿ ಚಾಂಪಿಯನ್‌ ಆಗಿದ್ದರು.

ಆದಾಗ್ಯೂ, ಪುರುಷರ ಬಿಡಬ್ಲ್ಯುಎಫ್ ಶ್ರೇಯಾಂಕದಲ್ಲಿ ಯಾವುದೇ ಭಾರತೀಯ ಶಟ್ಲರ್ ಅಗ್ರ 10ರೊಳಗಿನ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಭಾರತದ ಶಟ್ಲರ್‌ಗಳಾದ ಬಿ ಸಾಯಿ ಪ್ರಣೀತ್ ಮತ್ತು ಕಿಡಂಬಿ ಶ್ರೀಕಾಂತ್ ಕ್ರಮವಾಗಿ 11 ಮತ್ತು 12 ನೇ ಸ್ಥಾನದಲ್ಲಿದ್ದರೆ, ಪರುಪಲ್ಲಿ ಕಶ್ಯಪ್ 23 ನೇ ಸ್ಥಾನದಲ್ಲಿದ್ದಾರೆ.

ಮಹಿಳಾ ಸಿಂಗಲ್ಸ್ ಶ್ರೇಯಾಂಕದಲ್ಲಿ ರಿಯೊ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು ಆರನೇ ಸ್ಥಾನದಲ್ಲಿದ್ದಾರೆ. ಅಲ್ಲದೆ ಹಾಂಗ್ ಕಾಂಗ್ ಓಪನ್ ಪಂದ್ಯಾವಳಿಯಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಸೈನಾ ನೆಹ್ವಾಲ್ 11ನೇ ಸ್ಥಾನ ಪಡೆದುಕೊಂಡಿದ್ದಾರೆ. ಏತನ್ಮಧ್ಯೆ, ಮಿಶ್ರ ಡಬಲ್ಸ್, ಪುರುಷರ ಡಬಲ್ಸ್ ಅಥವಾ ಮಹಿಳಾ ಡಬಲ್ಸ್ ನಲ್ಲಿಯೂ ಟಾಪ್ 10 ಶ್ರೇಯಾಂಕದಲ್ಲಿ ಯಾವ ಭಾರತೀಯ ಜೋಡಿ ಕಾಣಿಸಿಕೊಂಡಿಲ್ಲ.

SCROLL FOR NEXT