ಕ್ರೀಡೆ

ಜಪಾನ್‌ ಓಪನ್‌ನಿಂದ ಭಾರತದ ಪಿ.ವಿ ಸಿಂಧು ಔಟ್‌

Lingaraj Badiger
ಟೋಕಿಯೊ: ಭಾರತ ಅಗ್ರ ಶ್ರೇಯಾಂಕಿತೆ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ ಸಿಂಧು ಅವರು ಇಲ್ಲಿ ನಡೆಯುತ್ತಿರುವ ಜಪಾನ್‌ ಓಪನ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲು ಅನುಭವಿಸುವ ಮೂಲಕ ಟೂರ್ನಿಯಿಂದ ಹೊರ ನಡೆದರು.
ಶುಕ್ರವಾರ 50 ನಿಮಿಷಗಳ ಕಾಲ ನಡೆದ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ನೀರಸ ಪ್ರದರ್ಶನ ತೋರಿದ ವಿಶ್ವದ ಐದನೇ ಶ್ರೇಯಾಂಕಿತೆ ಸಿಂಧು ಅವರು 18-21, 15-21 ನೇರ ಸೆಟ್‌ಗಳಿಂದ ಎರಡನೇ ಶ್ರೇಯಾಂಕದ ಜಪಾನ್‌ನ ಅಕನೆ ಯಮಗುಚಿ ಅವರ ವಿರುದ್ಧ ಪರಾಭವಗೊಂಡರು. ಈ ಮೂಲಕ ಕಳೆದ ಇಂಡೋನೇಷ್ಯಾ ಓಪನ್‌ನಲ್ಲಿ ಫೈನಲ್‌ ತಲುಪಿದ್ದ ಸಿಂಧು ಜಪಾನ್‌ ಓಪನ್‌ನಲ್ಲಿ ಸೆಮಿಫೈನಲ್‌ ತಲುಪುವಲ್ಲಿ ವಿಫಲರಾದರು.
ಅದ್ಭುತ ಪ್ರದರ್ಶನ ತೋರಿದ ಜಪಾನ್ ಆಟಗಾರ್ತಿ ಭಾರತದ ಆಟಗಾರ್ತಿಯನ್ನು ಸೆದೆಬಡಿಯುವಲ್ಲಿ ಸಫಲರಾದರು. ಮೊದಲ ಸೆಟ್‌ನಲ್ಲಿ ಇಬ್ಬರು ಆಟಗಾರ್ತಿಯರಿಂದ ಭಾರಿ ಪೈಪೋಟಿ ನಡೆಯಿತು. ಅಂತೆಯೇ 3-3 ಸಮಬಲದ ಮೂಲಕ ಮೊದಲ ಗೇಮ್ ಸಾಗುತ್ತಿತ್ತು. ಈ ವೇಳೆ ಹೈದರಾಬಾದ್‌ ಆಟಗಾರ್ತಿ 11-7 ಮುನ್ನಡೆ ಗಳಿಸಿದ್ದರು. ಆದರೆ, ಅದೇ ಲಯ ಮುಂದುವರಿಸುವಲ್ಲಿ ವಿಫಲರಾದರು. ಆಕ್ರಮಣಕಾರಿ ಆಟ ಪ್ರದರ್ಶನ ತೋರಿದ ಅಕನೆ ಯಮಗುಚಿ ಅವರು 16-14 ಮುನ್ನಡೆಯೊಂದಿಗೆ ಮೊದಲನೇ ಸೆಟ್‌ ಅನ್ನು ತನ್ನದಾಗಿಸಿಕೊಂಡರು.
ಬಳಿಕ, ಎರಡನೇ ಸೆಟ್‌ ಗೆದ್ದು ಸಮಬಲ ಸಾಧಿಸುವ ಲೆಕ್ಕಾಚಾರದಲ್ಲಿ ಕಣಕ್ಕೆ ಇಳಿದಿದ್ದ ಸಿಂಧು, ಪ್ರಬಲ ಹೋರಾಟ ನಡೆಸಿದರು. ಆದರೂ, ಅವರು ಜಪಾನ್‌ ಆಟಗಾರ್ತಿಯನ್ನು ತಡೆಯುವಲ್ಲಿ ವಿಫಲರಾದರು. ಹಾಗಾಗಿ, ಆರು ಅಂಕಗಳ ಅಂತರದಲ್ಲಿ ಸೋಲುಂಡರು.
SCROLL FOR NEXT