ಕ್ರೀಡೆ

ನೀರಜ್ ಚೋಪ್ರಾರಿಂದ ಇತಿಹಾಸ ಸೃಷ್ಟಿ: ಪ್ರಧಾನಿ ಮೋದಿ; ಯುವಕರಿಗೆ ಸ್ಫೂರ್ತಿ ಎಂದ ರಾಷ್ಟ್ರಪತಿಗಳು

Lingaraj Badiger

ನವದೆಹಲಿ: ಜಾವಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಒಲಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. 

ನೀರಜ್ ಚೋಪ್ರಾ ಅವರು ಈ ಸಾಧನೆ ಶಾಶ್ವತವಾಗಿ ಸ್ಮರಿಸಲಾಗುತ್ತದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದ್ದಾರೆ.

ಚೋಪ್ರಾ ಶನಿವಾರ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಚಿನ್ನ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

"ಟೋಕಿಯೊದಲ್ಲಿ ಇತಿಹಾಸವನ್ನು ಸೃಷ್ಟಿ ಮಾಡಲಾಗಿದೆ! ಇಂದು ಅವರು ಸಾಧಿಸಿದ್ದನ್ನು ಶಾಶ್ವತವಾಗಿ ಸ್ಮರಿಸಲಾಗುತ್ತದೆ. ಯುವ ನೀರಜ್ ಅಸಾಧಾರಣವಾಗಿ ಉತ್ತಮ ಸಾಧನೆ ಮಾಡಿದ್ದಾರೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

"ಅವರು(ಚೋಪ್ರಾ) ಅತ್ಯದ್ಭುತ ಉತ್ಸಾಹದಿಂದ ಆಡಿದರು ಮತ್ತು ಅಪ್ರತಿಮ ಮನೋಭಾವವನ್ನು ತೋರಿಸಿದರು. ಚಿನ್ನ ಗೆದ್ದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು" ಎಂದು ಪ್ರಧಾನಿ ಹೇಳಿದ್ದಾರೆ.

ಇನ್ನೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹ ಚಿನ್ನ ಗೆದ್ದ ನೀರಜ್ ಚೋಪ್ರಾ ಅವರನ್ನು ಅಭಿನಂದಿಸಿದ್ದು, ಅವರ ಈ ಸಾಧನೆಯಿಂದ ಇಡೀ ದೇಶ ಹರ್ಷಗೊಂಡಿದೆ ಮತ್ತು ಅವರ ಸಾಧನೆ ದೇಶದ ಯುವಕರಿಗೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದ್ದಾರೆ.

"ನೀರಜ್ ಚೋಪ್ರಾ ಅವರದ್ದು ಅಭೂತಪೂರ್ವ ಗೆಲುವು! ನಿಮ್ಮ ಜಾವೆಲಿನ್ ಚಿನ್ನ ಎಲ್ಲಾ ಅಡೆತಡೆಗಳನ್ನು ಮುರಿದು ಇತಿಹಾಸವನ್ನು ಸೃಷ್ಟಿಸಿದೆ. ನಿಮ್ಮ ಮೊದಲ ಒಲಂಪಿಕ್ಸ್‌ನಲ್ಲಿ ನೀವು ಭಾರತಕ್ಕೆ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಪದಕವನ್ನು ತಂದಿದ್ದೀರಿ. ನಿಮ್ಮ ಸಾಧನೆಯು ನಮ್ಮ ಯುವಕರಿಗೆ ಸ್ಫೂರ್ತಿ ನೀಡುತ್ತದೆ. ಭಾರತವು ಹರ್ಷಗೊಂಡಿದೆ! ಹೃತ್ಪೂರ್ವಕ ಅಭಿನಂದನೆಗಳು!" ಎಂದು ಕೋವಿಂದ್ ಟ್ವೀಟ್ ಮಾಡಿದ್ದಾರೆ.

SCROLL FOR NEXT