ಕ್ರೀಡೆ

ಪ್ಯಾರಲಿಂಪಿಕ್ಸ್: ಭಾರತದ ಯೋಗೇಶ್ ಕತುನಿಯಾ-ದೇವೇಂದ್ರ ಜಝಾರಿಯಾಗೆ ಬೆಳ್ಳಿ, ಸುಂದರ್ ಸಿಂಗ್ ಗುರ್ಜ್ಜಾರ್ ಗೆ ಕಂಚು

Sumana Upadhyaya

ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಡಿಸ್ಕಸ್ ಥ್ರೋನಲ್ಲಿ ಯೋಗೇಶ್ ಕತುನಿಯಾ ಹಾಗೂ ಜಾವೆಲಿನ್ ಥ್ರೋನಲ್ಲಿ ದೇವೇಂದ್ರ ಜಝಾರಿಯಾ ಬೆಳ್ಳಿ ಪದಕ ಜಯಿಸಿದ್ದಾರೆ. ಜಾವೆಲಿನ್ ಥ್ರೋನಲ್ಲಿ ಸುಂದರ್ ಸಿಂಗ್ ಗುರ್ಜ್ಜಾರ್ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಅದ್ವಿತೀಯ ಸಾಧನೆ ಮಾಡುತ್ತಿದೆ.

24ರ ಹರೆಯದ ಯೋಗೇಶ್ ದೆಹಲಿಯ ಕಿರೋರಿಮಲ್ ಕಾಲೇಜಿನಲ್ಲಿ ಬಿ.ಕಾಂ ಪದವೀಧರನಾಗಿದ್ದು, ಬೆಳ್ಳಿಯನ್ನು ಗೆಲ್ಲುವ ತನ್ನ ಆರನೇ ಮತ್ತು ಕೊನೆಯ ಪ್ರಯತ್ನದಲ್ಲಿ ಡಿಸ್ಕ್ ಅನ್ನು 44.38 ಮೀ ದೂರಕ್ಕೆ ಎಸೆಯುವ ಮೂಲಕ ಉತ್ತಮ ಪ್ರದರ್ಶನ ತೋರಿಸಿದ್ದಾರೆ. ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ದೇವೇಂದ್ರ ಜಝಾರಿಯಾ ಮತ್ತು ಸುಂದರ್ ಸಿಂಗ್ ಗುರ್ಜ್ಜಾರ್ ಅವರು ಜಾವೆಲಿನ್ ಥ್ರೋ ಕ್ಲಾಸ್ ಎಫ್ 46 ವಿಭಾಗದಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ಡಿಸ್ಕಸ್ ಎಸೆತದಲ್ಲಿ ಬೆಳ್ಳಿ ಪದಕ ಗೆದ್ದ ಯೋಗೀಶ್ ಕತುನಿಯಾ ಸ್ನೇಹಿತರು ಹುಟ್ಟೂರಾದ ಹರಿಯಾಣದ ಬಹದ್ದುರ್ ಗರ್ ನಲ್ಲಿ ನೃತ್ಯ ಮತ್ತು ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಪ್ಯಾರಾಲಿಂಪಿಕ್ಸ್‌ನಲ್ಲಿ ಎಫ್ 56 ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ನಂತರ ಡಿಸ್ಕಸ್ ಎಸೆತಗಾರ ಯೋಗೀಶ್ ಕತುನಿಯಾ ಭಾವುಕರಾಗಿ, ಬೆಳ್ಳಿ ಪದಕ ಗೆದ್ದ ಮೇಲೆ ನಾನು ಪುಳಕಿತನಾಗಿದ್ದೇನೆ. SAI, PCI, ಭಾರತದ ಪ್ಯಾರಾಲಿಂಪಿಕ್ ಸಮಿತಿ ಮತ್ತು ವಿಶೇಷವಾಗಿ ನನ್ನ ತಾಯಿಯ ಬೆಂಬಲಕ್ಕಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಇವರ ಶ್ರೇಷ್ಠ ಸಾಮರ್ಥ್ಯಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಕೋರಿದ್ದಾರೆ.

SCROLL FOR NEXT