ಕ್ರೀಡೆ

ಟೋಕಿಯೊ ಒಲಂಪಿಕ್ಸ್: ಜಪಾನ್ ಮಣಿಸಿದ ಭಾರತ ಹಾಕಿ ಪುರುಷರ ತಂಡ

Srinivasamurthy VN

ಟೋಕಿಯೊ:  ಟೊಕಿಯೋ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಹಾಕಿ ಪುರುಷರ ತಂಡ ಭರ್ಜರಿ ಜಯ ಸಾಧಿಸಿದೆ.

ಇಂದು ನಡೆದ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಭಾರತ ತಂಡ ಜಪಾನ್ ವಿರುದ್ಧ 5-3 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.

ಆರಂಭದಿಂದಲೇ ಜಪಾನ್ ಮೇಲೆ ಆಕ್ರಮಣಕಾರಿ ಪ್ರದರ್ಶನ ನೀಡಿದ ಭಾರತ ತಂಡ ಪಂದ್ಯದ 13ನೇ ನಿಮಿಷದಲ್ಲೇ ಮೊದಲ ಗೋಲ್ ದಾಖಲಿಸಿತು. ಪೆನಾಲ್ಟಿ ಕಾರ್ನರ್ ಅವಕಾಶ ಪಡೆದ ಭಾರತದ  ಹರ್ಮನ್ ಪ್ರೀತ್ ಸಿಂಗ್ ಅದನ್ನು ಗೋಲಾಗಿ ಪರಿವರ್ತಿಸಿದರು.  ಬಳಿಕ ಕೇವಲ 4 ನಿಮಿಷಗಳ ಅಂತರದಲ್ಲಿ ಮತ್ತೆ ಭಾರತದ ಪರ ಸಿಮ್ರಂಜೀತ್ ಸಿಂಗ್ ಮತ್ತು ಗುರ್ಜಂತ್ ಸಿಂಗ್ ಜಂಟಿಯಾಗಿ ಗೋಲು ತಂದುಕೊಟ್ಟರು.  ಬಳಿಕ 2 ನಿಮಿಷಗಳ ಅಂತರದಲ್ಲಿ ಅಂದರೆ 19ನೇ ನಿಮಿಷದಲ್ಲಿ ತಿರುಗೇಟು ನೀಡಿದ ಜಪಾನ್ ಮೊದಲ ಗೋಲು ದಾಖಲಿಸಿತು. 33ನೇ ನಿಮಿಷದಲ್ಲಿ ಮತ್ತೆ ಜಪಾನ್ ಗೋಲು ದಾಖಲಿಸುವ ಮೂಲಕ ಭಾರತ ತಂಡಕ್ಕೆ ತಿರುಗೇಟು ನೀಡಿತು. 

ಆದರೆ 34ನೇ ನಿಮಿಷದಲ್ಲಿ ಭಾರತದ ಪರ ಶಮ್ಸೀರ್ ಸಿಂಗ್ ಗೋಲು ದಾಖಲಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಬಳಿಕ 51 ನಿಮಿಷದಲ್ಲಿ ಭಾರತದ ಪರ ನೀಲಕಂಠ ಶರ್ಮಾ ಮತ್ತು ನೇ ನಿಮಿಷದಲ್ಲಿ ವರಣ್ ಕುಮಾರ್ ಮತ್ತೆರಡು ಗೋಲು ದಾಖಲಿಸಿ ಅಂತರವನ್ನು 5-2ಕ್ಕೆ ಹೆಚ್ಚಿಸಿದರು. ಈ ಹಂತದಲ್ಲಿ ಸೋಲಿನ ಒತ್ತಡಕ್ಕೆ ಸಿಲುಕಿದ ಜಪಾನ್ ಅಂತಿಮ ಹಂತದಲ್ಲಿ ಗೋಲು ದಾಖಲಿಸಿತಾದರೂ ಆ ಹೊತ್ತಿಗಾಗಲೇ ಪಂದ್ಯ ಕೈ ಚೆಲ್ಲಿತ್ತು. 

ಈ ಮೂಲಕ ಭಾರತ ತಂಡ ಜಪಾನ್ ವಿರುದ್ಧ 5-3 ಅಂತರದ ಜಯ ದಾಖಲಿಸಿತು.
 

SCROLL FOR NEXT