ಕ್ರೀಡೆ

ಟೋಕಿಯೋ ಪ್ಯಾರಾಲಿಂಪಿಕ್ಸ್ ಬೆಳ್ಳಿ ಗೆದ್ದ ಪ್ರವೀಣ್ ಕುಮಾರ್ ಗೆ ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಅಭಿನಂದನೆ!

Srinivasamurthy VN

ನವದೆಹಲಿ: ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದು ಕೊಟ್ಟು ದಾಖಲೆ ನಿರ್ಮಿಸಿರುವ ಪ್ರವೀಣ್ ಕುಮಾರ್ ಅವರ ಶ್ರಮಕ್ಕೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. 

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಪ್ರವೀಣ್ ಕುಮಾರ್ ಅವರಿಗೆ ಶುಭಾಶಯ ಕೋರಿದ್ದು, ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಪ್ರವೀಣ್ ಕುಮಾರ್ ದೇಶದ ಹೆಮ್ಮೆ. ಈ ಪದಕ ಅವರ ಕಠಿಣ ಪರಿಶ್ರಮ ಮತ್ತು ಅಪ್ರತಿಮ ಸಮರ್ಪಣೆಯ ಫಲಿತಾಂಶವಾಗಿದೆ. ಅವರಿಗೆ ಅಭಿನಂದನೆಗಳು. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು ಎಂದು ಟ್ವೀಟ್ ಮಾಡಿದ್ದಾರೆ.

ಅಂತೆಯೇ ಕೇಂದ್ರ ಸಚಿವ ಅಮಿತ್ ಶಾ ಅವರೂ ಕೂಡ ಪ್ರವೀಣ್ ಕುಮಾರ್ ಅವರನ್ನು ಅಭಿನಂದಿಸಿದ್ದು, 'ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಪ್ರವೀಣ್ ಕುಮಾರ್ ಅವರಿಗೆ ಅಭಿನಂದನೆಗಳು. ನಿಮ್ಮ ಉತ್ಸಾಹ ಮತ್ತು ಬದ್ಧತೆಯು ರಾಷ್ಟ್ರಕ್ಕೆ ಹೆಚ್ಚಿನ ಕೀರ್ತಿಯನ್ನು ತರುತ್ತದೆ ಎಂದು ನನಗೆ ಖಾತ್ರಿಯಿದೆ. ನಾವು ನಿಮ್ಮ ಬಗ್ಗೆ ಅತ್ಯಂತ ಹೆಮ್ಮೆ ಪಡುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರೂ ಕೂಡ ಪ್ರವೀಣ್ ಕುಮಾರ್ ಸಾಧನೆಯನ್ನು ಶ್ಲಾಘಿಸಿದ್ದು, 'ಪುರುಷರ ಹೈಜಂಪ್ ಟಿ64 ಫೈನಲ್‌ನಲ್ಲಿ 2.07 ಮೀ ಜಿಗಿಯುವ ಮೂಲಕ ಬೆಳ್ಳಿ ಪದಕ ಗೆದ್ದ ಪ್ರವೀಣ್ ಕುಮಾರ್ ಅವರಿಗೆ ಅಭಿನಂದನೆಗಳು, ಇದು ಹೊಸ ಏಷ್ಯನ್ ದಾಖಲೆ ಸೃಷ್ಟಿಸಿದೆ. ಇದು ಟೋಕಿಯೋ 2020 ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ 11 ನೇ ಪದಕವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಕರ್ನಾಟಕದ ಆರೋಗ್ಯ ಸಚಿವ ಕೆ ಸುಧಾಕರ್ ಅವರೂ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, 2.07 ಮೀಟರ್ ನ ಅದ್ಭುತ ಜಿಗಿತದೊಂದಿಗೆ ಪುರುಷರ ಹೈಜಂಪ್ ಟಿ 64 ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಪ್ರವೀಣ್ ಕುಮಾರ್ ಅವರಿಗೆ ಅಭಿನಂದನೆಗಳು. ಪ್ರವೀಣ್ ಕುಮಾರ್ ಅವರ ಪರಿಶ್ರಮ ಈಗ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕದ ಸಂಖ್ಯೆಯನ್ನು 11 ಕ್ಕೆ ಏರಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.

SCROLL FOR NEXT