ಕ್ರೀಡೆ

ಕಾಮನ್ ವೆಲ್ತ್ ಗೇಮ್ಸ್ 2022: ನಡಿಗೆಯಲ್ಲಿ ಪ್ರಿಯಾಂಕಾ, ಸ್ಟೀಪಲ್ ಚೇಸ್ ನಲ್ಲಿ ಅವಿನಾಶ್ ಗೆ ಬೆಳ್ಳಿ

Srinivasamurthy VN

ಬರ್ಮಿಂಗ್ ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಮುಂದುವರೆದಿದ್ದು, ನಡಿಗೆ ಮತ್ತು ಸ್ಟೀಪಲ್ ಚೇಸ್ ನಲ್ಲಿ 2 ಬೆಳ್ಳಿ ಪದಕ ದಕ್ಕಿದೆ.

10,000 ಮೀಟರ್ ಮಹಿಳೆಯರ ನಡಿಗೆ ಸ್ಪರ್ಧೆಯಲ್ಲಿ ಭಾರತದ ಪ್ರಿಯಾಂಕಾ ಗೋಸ್ವಾಮಿ ಬೆಳ್ಳಿ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ನಡಿಗೆ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಪ್ರಿಯಾಂಕಾ ಗೋಸ್ವಾಮಿ ಶನಿವಾರ ಇತಿಹಾಸ ಬರೆದಿದ್ದಾರೆ.

ಪ್ರಿಯಾಂಕಾ 42:34.30 ಸಮಯದಲ್ಲಿ ತಮ್ಮ ಸ್ಪರ್ಧೆ ಪೂರ್ಣಗೊಳಿಸಿದ್ದು, ಕೀನ್ಯಾದ ಎಮಿಲಿ ವಾಮುಸಿ ಎನ್‌ಗಿ (43:50.86) ಕಂಚು ಪಡೆದರು. ಸ್ಪರ್ಧೆಯಲ್ಲಿದ್ದ ಇತರ ಭಾರತೀಯರಾದ ಭಾವನಾ ಜಾಟ್ 47:14.13 ವೈಯಕ್ತಿಕ ಅತ್ಯುತ್ತಮ ಸಮಯದೊಂದಿಗೆ ಎಂಟನೇ ಮತ್ತು ಕೊನೆಯ ಸ್ಥಾನ ಪಡೆದರು.  

2010 ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ 20 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದ ಮೊದಲ ಭಾರತೀಯ ಹರ್ಮಿಂದರ್ ಸಿಂಗ್ ಅವರನ್ನು ಇಲ್ಲಿ ಸ್ಮರಿಸಬಹುದು.

ಸ್ಟೀಪಲ್ ಚೇಸ್ ನಲ್ಲಿ ಅವಿನಾಶ್ ಗೆ ಬೆಳ್ಳಿ
ಇನ್ನು ಪುರುಷರ 3000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಭಾರತದ ಅವಿನಾಶ್ ಮುಕುಂದ್ ಸಬ್ಲೆ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ. ಅಂತೆಯೇ ಈ ಪಂದ್ಯದ ಮೂಲಕ ರಾಷ್ಟ್ರೀಯ ದಾಖಲೆ ಮುರಿದು ಹೊಸ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಈ ಹಿಂದೆ 3000ಮೀ ಸ್ಟೀಪಲ್‌ಚೇಸ್, 5000ಮೀ ಮತ್ತು ಹಾಫ್ ಮ್ಯಾರಥಾನ್ ನಲ್ಲಿ ಅವಿನಾಶ್ ತಮ್ಮದೇ ದಾಖಲೆಯನ್ನು ಮುರಿದಿದ್ದರು.

ಫೈನಲ್ ಗೇರಿದ ರೆಸ್ಲರ್ ಗಳು, ಭಾರತಕ್ಕೆ ಮತ್ತೆ 3 ಪದಕ ಖಚಿತ
ಉಳಿದಂತೆ ರೆಸ್ಲಿಂಗ್ ವಿಭಾಗದಲ್ಲಿ ಭಾರತದ ಮೂವರು ರೆಸ್ಲರ್ ಗಳು ಪೈನಲ್ ಗೇರಿದ್ದು ಆ ಮೂಲಕ ಹಾಲಿ ಕ್ರೀಡಾಕೂಟದಲ್ಲಿ ರೆಸ್ಲಿಂಗ್ ವಿಭಾಗದಲ್ಲಿ ಭಾರತಕ್ಕೆ ಮತ್ತೆ ಮೂರು ಪದಕ ದೊರೆಯುವುದು ನಿಚ್ಚಳವಾಗಿದೆ. ಪುರುಷರ 51 ಕೆಜಿ ಫ್ಲೈವೇಟ್ ಬಾಕ್ಸಿಂಗ್‌ನಲ್ಲಿ ಭಾರತದ ಅಮಿತ್ ಪಂಗಲ್ ಅವರು ಜಾಂಬಿಯಾದ ಪ್ಯಾಟ್ರಿಕ್ ಚಿನ್ಯೆಂಬಾ ವಿರುದ್ಧ 5-1 ಅಂಕಗಳ ಅಂತರದಲ್ಲಿ ಮಣಿಸಿ ಫೈನಲ್‌ಗೆರಿದ್ದಾರೆ.

ಅಂತೆಯೇ ಪುರುಷರ 74 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಭಾರತದ ಕುಸ್ತಿಪಟು ನವೀನ್ ಇಂಗ್ಲೆಂಡ್‌ನ ಚಾರ್ಲಿ ಬೌಲಿಂಗ್ ರನ್ನು ಸೋಲಿಸಿ ಪೈನಲ್ ಗೇರಿದ್ದು, ಈ ವಿಭಾಗದಲ್ಲಿ ಭಾರತಕ್ಕೆ ಕನಿಷ್ಠ ಬೆಳ್ಳಿಯ ಭರವಸೆ ನೀಡಿದ್ದಾರೆ. 

ಇನ್ನು ಮಹಿಳಾ ಬಾಕ್ಸಿಂಗ್‌ನಲ್ಲಿ ಭಾರತದ ಬಾಕ್ಸರ್ ನೀತು ಘಂಗಾಸ್ 48 ಕೆಜಿ ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿ ಭಾರತಕ್ಕೆ ಮತ್ತೊಂದು ಪದಕ ಖಚಿತಪಡಿಸಿದ್ದಾರೆ.

SCROLL FOR NEXT