ಕ್ರೀಡೆ

ಜಾವೆಲಿನ್ ಥ್ರೋ ಕ್ರೀಡಾಪಟು ನೀರಜ್ ಚೋಪ್ರಾ ಇದೀಗ ಮತ್ತೊಂದು ದಾಖಲೆಯ ಸರದಾರ

Manjula VN

ನವದೆಹಲಿ: ಟೋಕಿಯೋ ಒಲಂಪಿಕ್ಸ್ ನಲ್ಲಿ ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದು ದಾಖಲೆ ಮಾಡಿದ್ದ ಜಾವೆಲಿನ್ ಥ್ರೋ ಕ್ರೀಡಾಪಟು ನೀರಜ್ ಚೋಪ್ರಾ ಅವರು ಇದೀಗ ಮತ್ತೊಂದು ದಾಖಲೆಯ ಸರದಾರ. ಫಿನ್ ಲ್ಯಾಂಡಿನಲ್ಲಿ ನಡೆದ ಪಾವೋ ನೂರ್ಮಿ ಗೇಮ್ಸ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ.

ಈ ಬಾರಿಯ ಜಾವೆಲಿನ್ ಥ್ರೋನಲ್ಲಿ ೮೯.೩೦ ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವುದರ ಮೂಲಕ ತಮ್ಮ ಹಿಂದಿನ ದಾಖಲೆಯನ್ನು ಅವರೇ ಸರಿಗಟ್ಟಿದ್ದಾರೆ. ಈ ಹಿಂದೆ ಒಲಂಪಿಕ್ಸ್ ನಲ್ಲಿ 87.58 ಮೀಟರ್ ದೂರ ಎಸೆದು ಇಡೀ ಭಾರತವೇ ತಮ್ಮತ್ತ ತಿರುಗಿ ನೋಡುವಂತಹ ಸಾಧನೆ ಗೈದಿದ್ದರು.

೨೦೨೧ರ ಪಟಿಯಾಲಾದಲ್ಲಿ ನಡೆದ 88.07 ಮೀಟರ್ ಜಾವೆಲಿನ್ ಥ್ರೋ ಮಾಡಿ, ರಾಷ್ಟ್ರೀಯ ದಾಖಲೆಗೆ ಅವರ ಹೆಸರನ್ನು ಸೇರಿಸಿದ್ದರು. ಫಿನ್ಲೆಂಡ್ ಸ್ಪರ್ಧೆಯ ಮೊದಲ ಸುತ್ತಿನಲ್ಲಿ 86.92 ಮೀಟರ್‌ ದೂರಕ್ಕೆ ಜಾವೆಲಿನ್ ಎಸೆದ ನೀರಜ್ ಎರಡನೇ ಅವಕಾಶದಲ್ಲಿ 89.30 ಮೀಟರ್‌ಗೆ ತಲುಪಿಸಿದರು. ಅನಂತರದ ಮೂರು ಅವಕಾಶಗಳಲ್ಲಿ ವಿಫಲರಾದ ಅವರು ಆರನೇ ಮತ್ತು ಅಂತಿಮ ಪ್ರಯತ್ನದಲ್ಲಿ 85.85 ಮೀಟರ್ ದೂರಕ್ಕೆ ಎಸೆದು ಬೆಳ್ಳಿ ಪದಕಕ್ಕೆ ಮುತ್ತಿಟ್ಟರು.

ಫಿನ್ಲೆಂಡ್‌ನ ಓಲಿವರ್‌ ಹೆಲಾಂಡರ‌ ಎರಡನೇ ಅವಕಾಶದಲ್ಲಿ 89.83 ಮೀಟರ್‌ ದೂರ ದಾಖಲಿಸಿದರು. ಅವರಿಗೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಒಲಿಯಿತು. ಅವರ ಹಿಂದಿನ ವೈಯಕ್ತಿಕ ದಾಖಲೆ 88.02 ಮೀಟರ್‌ ಆಗಿತ್ತು.

93.07 ಮೀಟರ್‌ ದೂರದ ವಿಶ್ವ ದಾಖಲೆಯನ್ನು ಹೊಂದಿರುವ ಗ್ರೆನಡಾದ ಆ್ಯಂಡರ್‌ಸನ್ ಪೀಟರ್ಸ್‌, ಈ ಸ್ಪರ್ಧೆಯಲ್ಲಿ 86.60 ಮೀಟರ್‌ ದೂರದ ಮೂಲಕ ಮೂರನೇ ಸ್ಥಾನ ಪಡೆದರು.

ಸದ್ಯ ಫಿನ್ಲೆಂಡ್‌ನಲ್ಲಿ ತರಬೇತಿ ಪಡೆಯುತ್ತಿರುವ ನೀರಜ್‌ ಚೋಪ್ರಾ, ಟರ್ಕಿ ಮತ್ತು ಅಮೆರಿಕದಲ್ಲಿ ಕೆಲವು ತಿಂಗಳು ತರಬೇತಿ ಪಡೆದಿದ್ದರು.

ಬೆಳ್ಳಿ ಗೆದ್ದು ದಾಖಲೆ ಮಾಡಿದ ನೀರಜ್ ಚೋಪ್ರಾ ಅವರಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಹೀಗೆ ಹಲವು ಗಣ್ಯರು ಶುಭಾಶಯ ತಿಳಿಸಿದರು.

ಫಿನ್‌ಲ್ಯಾಂಡ್‌ನಲ್ಲಿ ನಡೆದ #PaavoNurmiGames ನಲ್ಲಿ 89.30 ಮೀಟರ್‌ ಎಸೆತದೊಂದಿಗೆ ಹೊಸ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿ ಬೆಳ್ಳಿಯನ್ನು ಗೆದ್ದುಕೊಂಡಿರುವ ಜಾವೆಲಿನ್ ಎಸೆತಗಾರ ಮತ್ತು ರಾಷ್ಟ್ರದ ಹೆಮ್ಮೆಯ ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

SCROLL FOR NEXT