ಕ್ರೀಡೆ

ಛತ್ತೀಸ್‌ಗಢ: ಪಂದ್ಯದ ವೇಳೆ ಗಾಯಗೊಂಡಿದ್ದ ಕಬಡ್ಡಿ ಆಟಗಾರನ ಸಾವು; ತಿಂಗಳಲ್ಲಿ ಇದು 3ನೇ ಸಾವು!

Vishwanath S

ಜಶ್‌ಪುರ: ಛತ್ತೀಸ್‌ಗಢದ ಜಶ್‌ಪುರ ಜಿಲ್ಲೆಯಲ್ಲಿ ಕಳೆದ ತಿಂಗಳು ನಡೆದ ಪಂದ್ಯದ ವೇಳೆ ಗಂಭೀರ ಗಾಯಗೊಂಡಿದ್ದ 28 ವರ್ಷದ ಕಬಡ್ಡಿ ಆಟಗಾರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಛತ್ತೀಸ್‌ಗಢಿಯ ಒಲಿಂಪಿಕ್ಸ್‌ನ ಅಂಗವಾಗಿ ರಾಜ್ಯ ಸರ್ಕಾರ ಆಯೋಜಿಸಿದ್ದ ಕಬಡ್ಡಿ ಪಂದ್ಯಗಳಲ್ಲಿ ಭಾಗವಹಿಸಿದ ನಂತರ ಮೃತಪಟ್ಟ ಆಟಗಾರರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. 

ಅಕ್ಟೋಬರ್ 17ರಂದು ಜಶ್‌ಪುರದ ಸುಂಧ್ರು ಗ್ರಾಮದಲ್ಲಿ ನಡೆದ ಕಬಡ್ಡಿ ಪಂದ್ಯದ ವೇಳೆ ಗಾಯಗೊಂಡಿದ್ದ ಸಮರು ಕೆರ್ಕೆಟ್ಟಾ ನಿನ್ನೆ ಮಧ್ಯಾಹ್ನ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಶ್‌ಪುರದ ಘುಮ್ರಾ ಗ್ರಾಮದ ಕೆರ್ಕೆಟ್ಟಾ ಅವರು ಬೆನ್ನುಹುರಿಗೆ ಗಂಭೀರವಾದ ಗಾಯದಿಂದ ಬಳಲುತ್ತಿದ್ದರು. ಆರಂಭದಲ್ಲಿ ಅವರನ್ನು ಸಮೀಪದಲ್ಲೇ ಇರುವ ತಪ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿಂದ ಅವರನ್ನು ನೆರೆಯ ರಾಯಗಢ ಜಿಲ್ಲೆಯ ಜಿಂದಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಸುಮಾರು ಒಂದು ತಿಂಗಳ ಚಿಕಿತ್ಸೆಯ ನಂತರ ಸಮರು ಸಾವನ್ನಪ್ಪಿದರು ಎಂದು ಅಧಿಕಾರಿ ಹೇಳಿದ್ದಾರೆ. 

ಇದಕ್ಕೂ ಮುನ್ನ ಮಹಿಳಾ ಕಬ್ಬಡಿ ಆಟಗಾರ್ತಿ ಅಕ್ಟೋಬರ್ 15 ರಂದು ರಾಯ್‌ಪುರದ ಆಸ್ಪತ್ರೆಯಲ್ಲಿ ನಿಧನರಾದರು. ಇನ್ನು ರಾಯ್‌ಗಢ್ ಜಿಲ್ಲೆಯಲ್ಲಿ ನಡೆದ ಪಂದ್ಯದ ವೇಳೆ ತೀವ್ರವಾಗಿ ಗಾಯಗೊಂಡಿದ್ದ 32 ವರ್ಷದ ವ್ಯಕ್ತಿಯೊಬ್ಬರು ಅಕ್ಟೋಬರ್ 11ರಂದು ಮೃತಪಟ್ಟಿದ್ದರು.

SCROLL FOR NEXT