ಕ್ರೀಡೆ

ಐಎಸ್ಎಲ್: ಬೆಂಗಳೂರು ತಂಡದ ವಿರುದ್ಧ ಪಂದ್ಯ ಕೈಬಿಟ್ಟಿದ್ದ ಕೇರಳ ಬ್ಲಾಸ್ಟರ್ಸ್ ತಂಡಕ್ಕೆ 4 ಕೋಟಿ ರೂ. ದಂಡ!

Vishwanath S

ನವದೆಹಲಿ: ಮಾರ್ಚ್ 3ರಂದು ಬೆಂಗಳೂರು ಎಫ್‌ಸಿ ವಿರುದ್ಧದ ಇಂಡಿಯನ್ ಸೂಪರ್ ಲೀಗ್ ಪ್ಲೇ-ಆಫ್ ಪಂದ್ಯವನ್ನು ಕೈಬಿಟ್ಟಿದ್ದಕ್ಕಾಗಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್(ಎಐಎಫ್‌ಎಫ್) ನ ಶಿಸ್ತು ಸಮಿತಿಯು ಕೇರಳ ಬ್ಲಾಸ್ಟರ್ಸ್ ಎಫ್‌ಸಿಗೆ 4 ಕೋಟಿ ರೂಪಾಯಿ ದಂಡ ವಿಧಿಸಿದೆ.

ಪಂದ್ಯದಲ್ಲಿ ಭಾಗಿಯಾಗಿರುವ ಎಲ್ಲಾ ತಂಡದ ಫ್ರಾಂಚೈಸಿಗಳ ಆಕ್ಷೇಪಣೆಗಳು ಮತ್ತು ಸಲ್ಲಿಕೆಗಳನ್ನು ಪರಿಗಣಿಸಿದ ನಂತರ ಪಂದ್ಯವನ್ನು ಕೈಬಿಡುವ ಈ ಅಕ್ಷಮ್ಯ ನಡವಳಿಕೆಗಾಗಿ ಸಾರ್ವಜನಿಕ ಕ್ಷಮೆಯಾಚಿಸುವಂತೆ ಶಿಸ್ತು ಸಮಿತಿಯು ಕೇರಳ ಬ್ಲಾಸ್ಟರ್ಸ್‌ಗೆ ಸೂಚಿಸಿದೆ. ಹಾಗೆ ಮಾಡದಿದ್ದಲ್ಲಿ ಬ್ಲಾಸ್ಟರ್ಸ್ ದಂಡದ ಮೊತ್ತವನ್ನು 6 ಕೋಟಿ ರೂಪಾಯಿಗೆ ಹೆಚ್ಚಿಸುವುದಾಗಿ ಎಐಎಫ್‌ಎಫ್ ಎಚ್ಚರಿಸಿದೆ.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸುನಿಲ್ ಛೆಟ್ರಿ ಫ್ರೀಕಿಕ್ ನಲ್ಲಿ ಬಿಎಫ್ ಸಿ ಪರ ಗೋಲು ಬಾರಿಸಿದ್ದು, ಆ ಬಳಿಕ ಬ್ಲಾಸ್ಟರ್ಸ್ ತಂಡ ಪ್ರತಿಭಟನೆ ನಡೆಸಿ ಮೈದಾನದಿಂದ ನಿರ್ಗಮಿಸಿತ್ತು. ಛೆಟ್ರಿಯ ಫ್ರೀಕಿಕ್‌ಗೆ ತಯಾರಾಗಲು ಸಾಧ್ಯವಾಗಲಿಲ್ಲ ಎಂದು ಬ್ಲಾಸ್ಟರ್ಸ್ ಹೇಳಿತ್ತು. ಈ ಸಂಬಂಧ ರೆಫರಿ ಕ್ರಿಸ್ಟಲ್ ಜಾನ್ಸ್ ವಿರುದ್ಧ ಕ್ಲಬ್ ಎಐಎಫ್ ಎಫ್ ಗೆ ದೂರು ಕೂಡ ಸಲ್ಲಿಸಿತ್ತು.

ಬ್ಲಾಸ್ಟರ್ಸ್ ಮುಖ್ಯ ಕೋಚ್ ಇವಾನ್ ವುಕೊಮಾನೊವಿಕ್ ಅವರನ್ನು ಎಐಎಫ್‌ಎಫ್ ಸ್ಪರ್ಧೆಗಳಲ್ಲಿ 10 ಪಂದ್ಯಗಳಿಗೆ ನಿಷೇಧಿಸಲಾಗಿದೆ. ಎಐಎಫ್‌ಎಫ್ ಶಿಸ್ತು ಸಂಹಿತೆಯ ಆರ್ಟಿಕಲ್ 9.1.2ರ ಅಡಿಯಲ್ಲಿ ಅವರಿಗೆ ಐದು ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಒಂದು ವಾರದೊಳಗೆ ಆದೇಶವನ್ನು ಅನುಸರಿಸುವಂತೆ ಫೆಡರೇಶನ್ ಬ್ಲಾಸ್ಟರ್ಸ್ ಮತ್ತು ವುಕೊಮಾನೋವಿಕ್‌ಗೆ ಸೂಚಿಸಿದೆ. ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಎರಡೂ ಪಕ್ಷಗಳಿಗೂ ಹಕ್ಕಿದೆ.

'ಅರ್ಧದಲ್ಲೇ ಪಂದ್ಯವನ್ನು ಕೈಬಿಡುವುದು ಜಾಗತಿಕ ಕ್ರೀಡಾ ಇತಿಹಾಸದಲ್ಲಿ ಅಪರೂಪದ ಘಟನೆಗಳಲ್ಲಿ ಒಂದಾಗಿದ್ದು ಅದು  ಫುಟ್‌ಬಾಲ್‌ನಲ್ಲಿ ವಿಶೇಷವಾಗಿದೆ ಎಂದು ಶಿಸ್ತು ಸಮಿತಿ ಹೇಳಿದೆ. ಭಾರತದ ವೃತ್ತಿಪರ ಫುಟ್‌ಬಾಲ್ ಇತಿಹಾಸದಲ್ಲಿ ಎರಡನೇ ಬಾರಿಗೆ ಅರ್ಧದಲ್ಲೇ ಪಂದ್ಯವನ್ನು ಕೈಬಿಡಲಾಗಿದೆ. 2012ರಲ್ಲಿ ಈಸ್ಟ್ ಬೆಂಗಾಲ್ ವಿರುದ್ಧ ಮೋಹನ್ ಬಗಾನ್ ತಂಡ ಪಂದ್ಯ ಕೈಬಿಟ್ಟಿತ್ತು.

SCROLL FOR NEXT