ಬೆಂಗಳೂರು: ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡಿರುವುದು ದುರದೃಷ್ಟಕರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಡೆದಿರುವುದು ದುರದೃಷ್ಟಕರ ಘಟನೆ. ವಿನೇಶ್ ಫೋಗಟ್ ಅವರ ಶಕ್ತಿ, ಸ್ಥೈರ್ಯ, ಮತ್ತು ಸಮರ್ಪಣೆ ರಾಷ್ಟ್ರವನ್ನು ಯಾವಾಗಲೂ ಪ್ರೇರಿಪಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಒಂದು ಕ್ಷಣ, ನಿಮ್ಮ ಲೆಕ್ಕವಿಲ್ಲದಷ್ಟು ಸಾಧನೆ ಹಾಗೂ ನೀವು ಭಾರತಕ್ಕೆ ತಂದ ಹೆಮ್ಮೆಯನ್ನು ಕಡಿಮೆ ಮಾಡುವುದಿಲ್ಲ. ನೀವು ಮತ್ತು ನಿಮ್ಮ ಈ ಸಾಧನೆಯ ಪಯಣದ ಬಗ್ಗೆ ನಮಗೆ ನಂಬಿಕೆ ಇದೆ. ನೀವು ಸದಾ ನಮ್ಮ ಚಾಂಪಿಯನ್ ಆಗಿರುತ್ತೀರಿ ಎಂದು ಸಿಎಂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಫೈನಲ್ ಪ್ರವೇಶಿಸಿದ್ದ ಕುಸ್ತಿಪಟು ವಿನೇಶ್ ಫೋಗಟ್ ಅಧಿಕ ತೂಕದ ಕಾರಣಕ್ಕಾಗಿ ಮಹಿಳೆಯರ 50 ಕೆಜಿ ಕುಸ್ತಿಯಿಂದ ಅನರ್ಹಗೊಂಡಿದ್ದಾರೆ.