ಫ್ಲೋರಿಡಾ: Copa America ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೊಲಂಬಿಯಾ ವಿರುದ್ಧ ಅರ್ಜೆಂಟಿನಾ 1-0 ಗೋಲಿನ ಅಂತರದ ವಿರೋಚಿತ ಗೆಲುವು ಸಾಧಿಸಿದ್ದು, ಆ ಮೂಲಕ ದಾಖಲೆಯ 16ನೇ ಬಾರಿಗೆ ಪ್ರಶಸ್ತಿ ಜಯಿಸಿದೆ.
ಸೋಮವಾರ ಬೆಳಗ್ಗೆ ನಡೆದ ಕೊಪಾ ಅಮೆರಿಕ(Copa America Final) ಫುಟ್‌ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಅರ್ಜೆಂಟೀನಾ ತಂಡ ಕೊಲಂಬಿಯಾ (Argentina vs Colombia) ವಿರುದ್ಧ 1-0 ಗೋಲುಗಳ ಅಂತರದಿಂದ ಗೆದ್ದು ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡಿದೆ.
ಬಿಕ್ಕಿ ಬಿಕ್ಕಿ ಅತ್ತ ಮೆಸ್ಸಿ
ಇನ್ನು ಈ ಫೈನಲ್ ಪಂದ್ಯದ ನಿರ್ಣಾಯಕ ಘಟದಲ್ಲಿ ತಂಡದ ಪ್ರಮುಖ ಆಟಗಾರ ಲಿಯೋನಲ್ ಮೆಸ್ಸಿ ಗಾಯಗೊಂಡು ಅನಿವಾರ್ಯವಾಗಿ ಹೊರಗುಳಿಯಬೇಕಾಯಿತು. ಈ ವೇಳೆ ಮೆಸ್ಸಿ ಬಿಕ್ಕಿ ಬಿಕ್ಕಿ ಅತ್ತರು. ಈ ಕುರಿತ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಮೆಸ್ಸಿ ಅನುಪಸ್ಥಿತಿಯಲ್ಲಿ ಕೊಲಂಬಿಯಾಗೆ ಗೋಲು ಗಳಿಸುವ ಸುವರ್ಣಾವಕಾಶವಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಇದೇ ಭಯ ಕೂಡ ಮೆಸ್ಸಿಗೂ ಇತ್ತು. ಇದೇ ಕಾರಣಕ್ಕೆ ಅವರು ಡಗೌಟ್ ನಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಸ್ವತಃ ಕೋಚ್ ಎಷ್ಟೇ ಸಮಾಧಾನ ಪಡಿಸಿದರೂ ಮೆಸ್ಸಿ ಸಮಾಧಾನವಾಗಲಿಲ್ಲ. ಅಂತಿಮವಾಗಿ ತಂಡ ಗೆಲುವು ಸಾಧಿಸಿದ ಬಳಿಕ ಮೆಸ್ಸಿ ಸಂಭ್ರಮಕ್ಕೆ ಕೊನೆಯೇ ಇರಲಿಲ್ಲ.
ಗೆಲುವಿನ ಗೋಲು ಭಾರಿಸಿದ ಲೌಟಾರೊ ಮಾರ್ಟಿನೆಜ್
ಎರಡನೇ ಹೆಚ್ಚುವರಿ ಅವಧಿಯಲ್ಲಿ ಅರ್ಜೆಂಟೀನಾ ತಂಡದ ಲೌಟಾರೊ ಮಾರ್ಟಿನೆಜ್ ಅವರು ಗೋಲು ಬಾರಿಸಿದರು. ಈ ಬಳಿಕ ಇತ್ತಂಡಗಳಿಂದ ಯಾವುದೇ ಗೋಲು ದಾಖಲಾಗಲಿಲ್ಲ. ಮಾರ್ಟಿನೆಜ್ ಅವರ ಏಕೈಕ ಗೋಲು ಅರ್ಜೆಂಟೀನಾಗೆ ಪ್ರಶಸ್ತಿ ಗೆಲ್ಲಿಸಿಕೊಟ್ಟಿತು. 23 ವರ್ಷಗಳ ಬಳಿಕ ಪ್ರಶಸ್ತಿ ಗೆಲ್ಲುವ ಇರಾದೆಯೊಂದಿಗೆ ಆಡಲಿಳಿದಿದ್ದ ಕೊಲಂಬಿಯಾಗೆ ನಿರಾಸೆಯಾಯಿತು.