ದೆಹಲಿ: ಕುಸ್ತಿ ಒಕ್ಕೂಟದ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಇತರ ಆರೋಪಗಳನ್ನು ದಾಖಲಿಸುವುದಕ್ಕೆ ದೆಹಲಿ ಕೋರ್ಟ್ ಆದೇಶಿಸಿದೆ.
ಮಹಿಳಾ ಕುಸ್ತಿಪಟುಗಳು ತಮಗೆ ಬ್ರಿಜ್ ಭೂಷಣ್ ಸಿಂಗ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು, ಈ ಪ್ರಕರಣದಲ್ಲಿ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ಕೋರ್ಟ್ ಹೇಳಿದೆ.
ಹೆಚ್ಚುವರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ಪ್ರಿಯಾಂಕ ರಜಪೂತ್ ಸಿಂಗ್ ವಿರುದ್ಧ ಸೆಕ್ಷನ್ 354 (ಮಹಿಳೆಯ ಘನತೆಯನ್ನು ಕುಗ್ಗಿಸುವ ನಿಟ್ಟಿನಲ್ಲಿ ಮಹಿಳೆಯ ಮೇಲೆ ಆಕ್ರಮಣ ನಡೆಸುವುದು) ಸೆಕ್ಷನ್ 354A (ಲೈಂಗಿಕ ಕಿರುಕುಳ) ಹಾಗೂ 506 (ಕ್ರಿಮಿನಲ್ ಬೆದರಿಕೆ) ಅಡಿ ಆರೋಪ ಪಟ್ಟಿ ದಾಖಲಿಸಲು ಸೂಚಿಸಿದ್ದಾರೆ.
ಆರೋಪಿಗಳ ವಿರುದ್ಧ ಆರೋಪ ಹೊರಿಸಲು ಸಾಕಷ್ಟು ಪುರಾವೆಗಳಿವೆ ಎಂದು ನ್ಯಾಯಾಧೀಶರು ಹೇಳಿದರು.
ಆದಾಗ್ಯೂ, ಆರು ಮಹಿಳಾ ಕುಸ್ತಿಪಟುಗಳಲ್ಲಿ ಒಬ್ಬರು ಸಲ್ಲಿಸಿದ ದೂರಿನಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಆ ಪ್ರಕರಣದಿಂದ ನ್ಯಾಯಾಲಯವು ಸಿಂಗ್ ಅವರನ್ನು ಬಿಡುಗಡೆ ಮಾಡಿದೆ. ಮೇ.21 ರಂದು ಅಧಿಕೃತವಾಗಿ ಕೋರ್ಟ್ ನಲ್ಲಿ ಆರೋಪಪಟ್ಟಿ ದಾಖಲಾಗಲಿದೆ. ಈ ಪ್ರಕರಣದಲ್ಲಿ ಸಹ-ಆರೋಪಿ ಮತ್ತು ಮಾಜಿ ಡಬ್ಲ್ಯುಎಫ್‌ಐ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ವಿರುದ್ಧ ಆರೋಪ ಪಟ್ಟಿ ದಾಖಲಿಸಲು ಕೊರ್ಟ್ ಆದೇಶಿಸಿದೆ.
ಸಿಂಗ್ ವಿರುದ್ಧ ಅಪ್ರಾಪ್ತ ಕುಸ್ತಿಪಟು ಸಲ್ಲಿಸಿರುವ ಲೈಂಗಿಕ ಕಿರುಕುಳದ ದೂರನ್ನು ರದ್ದುಗೊಳಿಸುವಂತೆ ಕೋರಿ ಪೊಲೀಸ್ ವರದಿಯನ್ನು ಸ್ವೀಕರಿಸಬೇಕೆ ಎಂಬುದರ ಕುರಿತು ಮತ್ತೊಂದು ದೆಹಲಿ ನ್ಯಾಯಾಲಯ ಮೇ 20 ರಂದು ತನ್ನ ಆದೇಶವನ್ನು ಪ್ರಕಟಿಸುವ ಸಾಧ್ಯತೆಯಿದೆ.
ಮಹಿಳಾ ಕುಸ್ತಿಪಟುಗಳಿಗೆ ದೊರೆತ ಜಯ: ಕೋರ್ಟ್ ತೀರ್ಪಿನ ಬಗ್ಗೆ ಬಜರಂಗ್, ಸಾಕ್ಷಿ ಇನ್ನಿತರ ಕುಸ್ತಿಪಟುಗಳ ಪ್ರತಿಕ್ರಿಯೆ
ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸುವುದಕ್ಕೆ ಅದೇಶಿಸಿರುವ ಕೋರ್ಟ್ ತೀರ್ಪನ್ನು ಖ್ಯಾತ ಕುಸ್ತಿಪಟುಗಳಾದ ಸಾಕ್ಷಿ ಮಲೀಕ್, ಬಜರಂಗ್ ಪುನಿಯಾ ಸ್ವಾಗತಿಸಿದ್ದು, ದೇಶದ ಮಹಿಳಾ ಕುಸ್ತಿಪಟುಗಳಿಗೆ ಸಂದ ಜಯ ಎಂದು ಬಣ್ಣಿಸಿದ್ದಾರೆ.
ಇದು ಮಹಿಳಾ ಕುಸ್ತಿಪಟುಗಳ ಹೋರಾಟಕ್ಕೆ ಸಂದ ಜಯವಾಗಿದೆ, "ದೇಶದ ಹೆಣ್ಣುಮಕ್ಕಳು ಇಂತಹ ಕಷ್ಟದ ಸಮಯವನ್ನು ಎದುರಿಸಬೇಕಾಗಿತ್ತು, ಆದರೆ ಈ ನಿರ್ಧಾರವು ಪರಿಹಾರವನ್ನು ನೀಡುತ್ತದೆ. ಮಹಿಳಾ ಕುಸ್ತಿಪಟುಗಳನ್ನು ಟ್ರೋಲ್ ಮಾಡಿದವರೂ ನಾಚಿಕೆಪಡಬೇಕು. ಸತ್ಯಮೇವ ಜಯತೆ.ಬಜರಂಗ್ ಪುನಿಯಾ
"ನಾವು ಗೌರವಾನ್ವಿತ ನ್ಯಾಯಾಲಯಕ್ಕೆ ಧನ್ಯವಾದ ಹೇಳುತ್ತೇವೆ. ನಾವು ಅನೇಕ ರಾತ್ರಿಗಳು ಬೇಸಿಗೆ ಮತ್ತು ಮಳೆಯ ವಾತಾವರಣದಲ್ಲಿ ಬೀದಿಗಳಲ್ಲಿ ಮಲಗಬೇಕಾಯಿತು, ನಮ್ಮ ಸ್ಥಿರವಾದ ವೃತ್ತಿಜೀವನವನ್ನು ತ್ಯಜಿಸಬೇಕಾಯಿತು, ಆಗ ಮಾತ್ರ ನಾವು ನ್ಯಾಯಕ್ಕಾಗಿ ಹೋರಾಟದಲ್ಲಿ ಕೆಲವು ಹೆಜ್ಜೆಗಳನ್ನು ಇಡಲು ಸಾಧ್ಯವಾಯಿತು, "ಪ್ರೀತಿ ಮತ್ತು ಆಶೀರ್ವಾದವನ್ನು ನೀಡಿದವರಿಗೆ ಹೃತ್ಪೂರ್ವಕ ಕೃತಜ್ಞತೆಗಳು ಮತ್ತು ಟ್ರೋಲ್ ಮಾಡಿದವರಿಗೆ ಮತ್ತು ಕೆಟ್ಟದ್ದನ್ನು ಹೇಳಿದವರಿಗೆ ದೇವರು ಆಶೀರ್ವದಿಸಲಿ. ಭಾರತಮಾತೆ ಚಿರಾಯುವಾಗಲಿಸಾಕ್ಷಿ ಮಲೀಕ್