ಟೋಕಿಯೊ: ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ನಲ್ಲಿ ಭಾರತದ ಅಥ್ಲೀಟ್ ಗಳು ಐತಿಹಾಸಿಕ ಸಾಧನೆ ಮಾಡಿದ್ದು, ಭಾರತದ ಮರಿಯಪ್ಪನ್ ತಂಗವೇಲು, ಸುಮಿತ್ ಆಂಟಿಲ್, ಏಕ್ತಾ ಭಯಾನ್ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಟೋಕಿಯೋ ಪ್ಯಾರಾಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಕ್ರೀಡಾಪಟು ಮರಿಯಪ್ಪನ್ ತಂಗವೇಲು T63 ಹೈಜಂಪ್ ವಿಭಾಗದಲ್ಲಿ 1.88 ಮೀಟರ್ ಎತ್ತರಕ್ಕೆ ಜಿಗಿಯುವ ಮೂಲಕ ದಾಖಲೆಯೊಂದಿಗೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಎಂಟು ವರ್ಷಗಳಲ್ಲಿ ಪ್ರಮುಖ ಕೂಟವೊಂದರಲ್ಲಿ ಇದು ಅವರ ಮೊದಲ ಚಿನ್ನದ ಪದಕವಾಗಿದೆ.
ಅಂತೆಯೇ ಹಾಲಿ ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಸುಮಿತ್ ಆಂಟಿಲ್ ಕೂಡ ಮಂಗಳವಾರ ತಮ್ಮ ಎಫ್ 64 ಜಾವೆಲಿನ್ ಥ್ರೋ ವಿಭಾಗಲ್ಲಿ ಅಗ್ರಸ್ಥಾಕ್ಕೇರಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. 69.50 ಮೀ ದೂರಕ್ಕೆ ಈಟಿಯನ್ನು ಎಸೆಯುವ ಮೂಲಕ ಸುಮಿತ್ ಆಂಟಿಲ್ ಅಗ್ರ ಸ್ಥಾನಕ್ಕೇರಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಟೋಕಿಯೊ ಪ್ಯಾರಾಲಿಂಪಿಕ್ಸ್ ಮತ್ತು 2023ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದ ಆಂಟಿಲ್, ಮುಡಿಗೆ ಇದೀಗ ಮತ್ತೊಂದು ಚಿನ್ನದ ಪದಕ ಏರಿದಂತಾಗಿದೆ. ಈ ಮೂಲಕ 25 ವರ್ಷದ ಹರಿಯಾಣದ ಅಥ್ಲೀಟ್ ಎಫ್64 ಜಾವೆಲಿನ್ ಸ್ಪರ್ಧೆಯಲ್ಲಿ ಜಾಗತಿಕ ಪ್ರಾಬಲ್ಯವನ್ನು ಮುಂದುವರಿಸಿದ್ದು, ಕಳೆದ ವರ್ಷ ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಾಗ ಅವರು 73.29 ಮೀ ಎಸೆಯುವ ಮೂಲಕ ದಾಖಲೆ ನಿರ್ಮಿಸಿದ್ದರು.
ಅಲ್ಲದೆ 2023 ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಕೊನೆಯ ಆವೃತ್ತಿಯಲ್ಲಿ ಚಿನ್ನ ಗೆದ್ದಾಗ ಅವರು70.83 ಮೀಟರ್ ದೂರಕ್ಕೆ ಜಾವೆಲಿನ್ ಎಸೆದ ಸಾಧನೆ ಮಾಡಿದ್ದಾರೆ.
ಏಕ್ತಾ ಭಯಾನ್ ಗೂ ಚಿನ್ನ
ಅಂತೆಯೇ ಮಹಿಳೆಯರ ಎಫ್51 ಕ್ಲಬ್ ಥ್ರೋ ಸ್ಪರ್ಧೆಯಲ್ಲಿ ಭಾರತದ ಏಕ್ತಾ ಭಯಾನ್ ಕೂಡ ಚಿನ್ನ ಪದಕಕ್ಕೆ ಭಾಜನರಾಗಿದ್ದು, ಅವರು ಅಂತಿಮ ಸುತ್ತಿನಲ್ಲಿ 20.12 ಮೀಟರ್ ದೂರಕ್ಕೆ ಎಸೆಯುವ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಹರಿಯಾಣ ಸಿವಿಲ್ ಸರ್ವಿಸಸ್ (ಎಚ್‌ಸಿಎಸ್) ಅಧಿಕಾರಿಯಾಗಿರುವ ಏಕ್ತಾ ಅವರು ಚೀನಾದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.
ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಭಾರತದ ಪದಕ ಬೇಟೆ
ಇನ್ನು ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಭಾರತದ ಪದಕ ಬೇಟೆ ಮುಂದುವರೆದಿದ್ದು, ಇಂದು ಸುಮಿತ್ ಆಂಟಿಲ್, ತಂಗವೇಲು ಮರಿಯಪ್ಪನ್ ಮತ್ತು ಏಕ್ತಾ ಭಯಾನ್ ಭಾರತದ ಖಾತೆಗೆ ತಲಾ ಒಂದೊಂದು ಚಿನ್ನದ ಪದಕವನ್ನು ಹಾಕುವ ಮೂಲಕ ಪದಕ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನಕ್ಕೆ ಜಿಗಿಯುವಂತೆ ಮಾಡಿದ್ದಾರೆ.
ಭಾರತದ ಪದಕಗಳ ಸಂಖ್ಯೆ ಇದೀಗ 10ಕ್ಕೇರಿದ್ದು, ಈ ಪೈಕಿ 4 ಚಿನ್ನ, 4 ಬೆಳ್ಳಿ, 2 ಕಂಚು ಸೇರಿದೆ. ಉಳಿದಂತೆ ಅಗ್ರ ಸ್ಥಾನದಲ್ಲಿರುವ ಚೀನಾ 41 (15 ಚಿನ್ನ, 13 ಬೆಳ್ಳಿ, 13 ಕಂಚು) ಪದಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದು, ಬ್ರೆಜಿಲ್ 25 (14 ಚಿನ್ನ, 6 ಬೆಳ್ಳಿ, 5 ಕಂಚು) ಪದಕಗಳೊಂದಿಗೆ 2ನೇ ಸ್ಥಾನದಲ್ಲಿದೆ.