ಕೋಲ್ಕತ್ತಾ: ಡಿಸೆಂಬರ್ 13 ರಂದು ನಡೆದ ಲಿಯೋನೆಲ್ ಮೆಸ್ಸಿ ಕಾರ್ಯಕ್ರಮದ ಆಯೋಜಕ ಸತಾದ್ರು ದತ್ತಾ ಅವರ ವಿಚಾರಣೆಯನ್ನು SIT ಪೊಲೀಸರು ಮುಂದುವೆರೆಸಿದ್ದು, ಅನೇಕ ವಿವರಗಳನ್ನು ಹಂಚಿಕೊಂಡಿದ್ದಾರೆ.
ಅಸಮಾಧಾನಗೊಂಡಿದ್ದ ಲಿನೋನೆಲ್ ಮೆಸ್ಸಿ: ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಮೆಸ್ಸಿ ಬಂದಾಗ ಅವರನ್ನು ತಬ್ಬಿಕೊಳ್ಳುವ ಅಥವಾ ಸ್ಪರ್ಶಿಸುವ ನಡೆಗಳಿಂದ ಅಸಮಾಧಾನಗೊಂಡು, ನಿಗದಿಯಂತೆ ಪೂರ್ಣ ಸಮಯ ಅಲ್ಲಿಯೇ ಉಳಿಯುವ ಬದಲು ಅರ್ಧದಲ್ಲಿಯೇ ಹೊರಟರು ಎಂದು ಎಸ್‌ಐಟಿ ಮೂಲಗಳು ಶನಿವಾರ ತಿಳಿಸಿವೆ.
ಮೆಸ್ಸಿಗೆ "ಬೆನ್ನು ಸ್ಪರ್ಶಿಸುವುದು ಅಥವಾ ತಬ್ಬಿಕೊಳ್ಳುವುದು ಇಷ್ಟವಿರಲಿಲ್ಲ. ಫುಟ್‌ಬಾಲ್ ಆಟಗಾರನ ರಕ್ಷಣೆಯ ಹೊಣೆ ಹೊತ್ತಿದ್ದ ವಿದೇಶಿ ಭದ್ರತಾ ಅಧಿಕಾರಿಗಳು ಮೊದಲೇ ತಿಳಿಸಿದ್ದರು ಎಂದು ದತ್ತಾ ವಿಚಾರಣೆ ವೇಳೆ ತಿಳಿಸಿರುವುದಾಗಿ ವರದಿಯಾಗಿದೆ.
ಅರೂಪ್ ಬಿಸ್ವಾಸ್ ಮೇಲಿನ ಆರೋಪವೇನು? ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ಕಾರ್ಯಕ್ರಮದುದ್ದಕ್ಕೂ ಮೆಸ್ಸಿಯ ಸಮೀಪದಲ್ಲಿದ್ದರು. ಫೋಟೋಗಳಿಗೆ ಪೋಸ್ ನೀಡುತ್ತಿರುವಾಗಲೂ ಅವರನ್ನು ಸ್ಪರ್ಶಿಸುವ ವಿಡಿಯೋಗಳು ವೈರಲ್ ಆಗಿವೆ. ಬಿಸ್ವಾಸ್ ತನ್ನ ಪ್ರಭಾವ ಬಳಸಿಕೊಂಡು ಸಂಬಂಧಿಕರು ಮತ್ತು ಪರಿಚಯಸ್ಥರಿಗೆ ಮೆಸ್ಸಿ ಭೇಟಿಗೆ ಪ್ರವೇಶ ಅನುಮತಿಸಿದ ಆರೋಪವಿದೆ.
ಎಷ್ಟು ಪಾಸ್ ನೀಡಲಾಗಿತ್ತು?
ಹೆಚ್ಚುತ್ತಿರುವ ಟೀಕೆಗಳ ನಡುವೆ ತನಿಖೆ ಪೂರ್ಣಗೊಳ್ಳುವವರೆಗೆ ಅವರು ಕ್ರೀಡಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆರಂಭದಲ್ಲಿ ಕೇವಲ 150 ಗ್ರೌಂಡ್ ಪಾಸ್‌ಗಳನ್ನು ನೀಡಲಾಗಿತ್ತು. ಆದರೆ, ಅತ್ಯಂತ ಪ್ರಭಾವಿ ವ್ಯಕ್ತಿ ಕ್ರೀಡಾಂಗಣಕ್ಕೆ ಬಂದಾಗ ನೀಡಲಾಗಿದ್ದ ಅದಕ್ಕೂ ಮೂರು ಪಟ್ಟು ಜನ ಸೇರಿದ್ದರು. ಇದೇ ಅವ್ಯವಸ್ಥೆಗೆ ಕಾರಣವಾಯಿತೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಲಿಯೋನೆಲ್ ಮೆಸ್ಸಿಗೆ ಕೊಟ್ಟ ಹಣ ಎಷ್ಟು?
ಮೆಸ್ಸಿಯ ಭಾರತ ಭೇಟಿಗೆ ಸಂಬಂಧಿಸಿದ ಹಣಕಾಸಿನ ವಿವರಗಳನ್ನೂ ದತ್ತಾ ಬಹಿರಂಗಪಡಿಸಿದ್ದಾರೆ."ಲಿಯೋನೆಲ್ ಮೆಸ್ಸಿ ಭಾರತ ಪ್ರವಾಸಕ್ಕಾಗಿ 89 ಕೋಟಿ ರೂ. ಪಾವತಿಸಿದ್ದರೆ, ಭಾರತ ಸರ್ಕಾರಕ್ಕೆ 11 ಕೋಟಿ ರೂ.ಗಳನ್ನು ತೆರಿಗೆಯಾಗಿ ಪಾವತಿಸಲಾಗಿದೆ. ಒಟ್ಟಾರೇ 100 ಕೋಟಿ ರೂ. ವೆಚ್ಚವಾಗಿರುವುದಾಗಿ ಅವರು ತಿಳಿಸಿದ್ದಾರೆ. ಈ ಮೊತ್ತದಲ್ಲಿ ಶೇಕಡಾ 30 ರಷ್ಟು ಪ್ರಾಯೋಜಕರಿಂದ ಪಡೆದಿದ್ದರೆ, ಇನ್ನೂ ಶೇಕಡಾ 30 ರಷ್ಟು ಟಿಕೆಟ್ ಮಾರಾಟದ ಮೂಲಕ ಆದಾಯ ಬಂದಿರುವುದಾಗಿ ಮೂಲಗಳು ತಿಳಿಸಿವೆ.
ದತ್ತಾ ಖಾತೆಯಲ್ಲಿ 20 ಕೋಟಿ ರೂ. ಪತ್ತೆ: ಈ ಮಧ್ಯೆ ದತ್ತಾ ಅವರ ಬ್ಯಾಂಕ್ ಖಾತೆಗಳಲ್ಲಿ 20 ಕೋಟಿ ರೂ. ಇರುವುದನ್ನು ಎಸ್‌ಐಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಶುಕ್ರವಾರ ದತ್ತಾ ಅವರ ಮನೆ ಮೇಲೆ ದಾಳಿ ನಡೆಸಿದ ನಂತರ ಹಲವಾರು ದಾಖಲೆಗಳನ್ನು SIT ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಕೋಲ್ಕತ್ತಾ ಮತ್ತು ಹೈದರಾಬಾದ್‌ನಲ್ಲಿ ನಡೆದ ಮೆಸ್ಸಿ ಕಾರ್ಯಕ್ರಮದ ಪ್ರಾಯೋಜಕರು ಹಾಗೂ ಟಿಕೆಟ್‌ಗಳನ್ನು ಮಾರಾಟ ಮಾಡಿದ್ದರಿಂದ ಪಡೆದ ಹಣ ಎಂದು ದತ್ತಾ ಹೇಳಿಕೊಂಡಿದ್ದಾರೆ. ಅವರ ಹೇಳಿಕೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.