ಇಸ್ಲಾಮಾಬಾದ್: ಈ ತಿಂಗಳ ಆರಂಭದಲ್ಲಿ ಬಹ್ರೇನ್‌ನಲ್ಲಿ ನಡೆದ ಖಾಸಗಿ ಟೂರ್ನಮೆಂಟ್‌ನಲ್ಲಿ ಭಾರತೀಯ ತಂಡದಲ್ಲಿ ಕಾಣಿಸಿಕೊಂಡ ನಂತರ ಪಾಕಿಸ್ತಾನದ ಪ್ರಸಿದ್ಧ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಉಬೈದುಲ್ಲಾ ರಜಪೂತ್ ಅವರನ್ನು ರಾಷ್ಟ್ರೀಯ ಫೆಡರೇಶನ್ ಅನಿರ್ದಿಷ್ಟಾವಧಿಗೆ ನಿಷೇಧಿಸಿದೆ.
ಶನಿವಾರ ತುರ್ತು ಸಭೆ ನಡೆಸಿದ ಪಾಕಿಸ್ತಾನ ಕಬಡ್ಡಿ ಫೆಡರೇಶನ್ (PKF) ಈ ನಿಷೇಧ ನಿರ್ಧಾರವನ್ನು ಕೈಗೊಂಡಿತು. ಫೆಡರೇಶನ್ ಅಥವಾ ಇತರ ಸಂಬಂಧಿತ ಅಧಿಕಾರಿಗಳಿಂದ ಕಡ್ಡಾಯವಾದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (NOC) ಪಡೆಯದೆ ಪಂದ್ಯಾವಳಿಯಲ್ಲಿ ಆಡಲು ವಿದೇಶಕ್ಕೆ ಪ್ರಯಾಣಿಸಿದ್ದಕ್ಕಾಗಿ ರಜಪೂತ್ ತಪ್ಪಿತಸ್ಥರೆಂದು ತೀರ್ಮಾನಿಸಲಾಯಿತು.
ಶಿಸ್ತು ಸಮಿತಿಯ ಮುಂದೆ ಮೇಲ್ಮನವಿ ಸಲ್ಲಿಸುವ ಹಕ್ಕು ರಜಪೂತ್‌ಗೆ ಇದೆ ಎಂದು PKF ಕಾರ್ಯದರ್ಶಿ ರಾಣಾ ಸರ್ವರ್ ಹೇಳಿದ್ದಾರೆ.
ರಜಪೂತ್ ಎನ್‌ಒಸಿ ಇಲ್ಲದೆ ವಿದೇಶಕ್ಕೆ ಪ್ರಯಾಣಿಸಿದ್ದು ಮಾತ್ರವಲ್ಲದೆ ಭಾರತದ ತಂಡವನ್ನು ಪ್ರತಿನಿಧಿಸಿದ್ದಾರೆ. ಆ ರಾಷ್ಟ್ರದ ಜರ್ಸಿಯನ್ನು ಧರಿಸಿದ್ದರು ಮತ್ತು ಒಂದು ಹಂತದಲ್ಲಿ ಪಂದ್ಯವನ್ನು ಗೆದ್ದ ನಂತರ ಅವರ ಹೆಗಲ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಸುತ್ತಿಕೊಂಡಿದ್ದರು ಎಂಬ ಅಂಶವನ್ನು ಫೆಡರೇಶನ್ ಗಂಭೀರವಾಗಿ ಪರಿಗಣಿಸಿದೆ ಎಂದು ಸರ್ವರ್ ಹೇಳಿದರು.
ಸಂಪೂರ್ಣ ತಪ್ಪು ತಿಳುವಳಿಕೆಯಿಂದ ಇದಾಗಿದೆ. ಖಾಸಗಿ ಪಂದ್ಯಾವಳಿಯಲ್ಲಿ ಆಡುವ ತಂಡ ಭಾರತೀಯ ತಂಡ ಎಂದು ಅವರಿಗೆ ಹೇಳಿರಲಿಲ್ಲ ಎಂದು ರಜಪೂತ್ ಹೇಳಿಕೊಂಡಿದ್ದಾರೆ. ಆದರೆ ಅವರು NOC ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಇನ್ನೂ ತಪ್ಪಿತಸ್ಥರಾಗಿದ್ದಾರೆ ಎಂದು ಸರ್ವರ್ ತಿಳಿಸಿದ್ದಾರೆ.