ಜಕಾರ್ತ: ಜಕಾರ್ತನಲ್ಲಿ ನಡೆದ ಇಂಡೋನೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಅಗ್ರ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕ್ವಾರ್ಟರ್ ಫೈನಲ್ ಪ್ರವೇಶಿದ್ದಾರೆ. ಆದರೆ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಅವರು ಮಹಿಳಾ ಸಿಂಗಲ್ಸ್‌ನ ಎರಡನೇ ಸುತ್ತಿನಲ್ಲೇ ನಿರ್ಗಮಿಸಿದರು.
2023 ರ ಚಾಂಪಿಯನ್‌ಗಳಾದ ಸಾತ್ವಿಕ್ ಮತ್ತು ಚಿರಾಗ್ ಅವರು ವಿಶ್ವದ 16 ನೇ ಶ್ರೇಯಾಂಕದ ಡ್ಯಾನಿಶ್ ಜೋಡಿ ರಾಸ್ಮಸ್ ಕ್ಜೇರ್ ಮತ್ತು ಫ್ರೆಡೆರಿಕ್ ಸೊಗಾರ್ಡ್ ಅವರನ್ನು 68 ನಿಮಿಷಗಳ ಎರಡನೇ ಸುತ್ತಿನ ಹಣಾಹಣಿಯಲ್ಲಿ 16-21, 21-18, 22-20 ಸೆಟ್‌ಗಳಿಂದ ಸೋಲಿಸಿದರು.
ಕಳೆದ ವಾರ ಸಿಂಗಾಪುರ ಓಪನ್ ಸೂಪರ್ 750 ಟೂರ್ನಿಯ ಸೆಮಿಫೈನಲ್ ತಲುಪಿದ್ದ ಸಾತ್ವಿಕ್ ಮತ್ತು ಚಿರಾಗ್ ಜೋಡಿ, ಮುಂದಿನ ಸುತ್ತಿನಲ್ಲಿ ಅಂದರೆ ಕ್ವಾರ್ಟರ್ ಫೈನಲ್ ನಲ್ಲಿ ಮಲೇಷ್ಯಾದ ಏಳನೇ ಶ್ರೇಯಾಂಕದ ಮ್ಯಾನ್ ವೀ ಚೋಂಗ್ ಮತ್ತು ಕೈ ವುನ್ ಟೀ ಅವರನ್ನು ಎದುರಿಸಲಿದೆ.
ಪಿವಿ ಸಿಂಧುಗೆ ಸೋಲು
ಇದಕ್ಕೂ ಮೊದಲು, ಪಿವಿ ಸಿಂಧು ಎರಡನೇ ಸುತ್ತಿನಲ್ಲಿ ವಿಶ್ವದ 8ನೇ ಶ್ರೇಯಾಂಕದ ಥೈಲ್ಯಾಂಡ್‌ನ ಪೋರ್ನ್‌ಪವೀ ಚೋಚುವಾಂಗ್ ವಿರುದ್ಧ ಸೋಲು ಅನುಭವಿಸಿದರು.
ನಿರ್ಣಾಯಕ ಪಂದ್ಯದಲ್ಲಿ 15-11 ಮುನ್ನಡೆ ಪಡೆದುಕೊಂಡಿದ್ದ ಸಿಂಧು, 78 ನಿಮಿಷಗಳ ಕಠಿಣ ಹೋರಾಟದಲ್ಲಿ ಥೈಲ್ಯಾಂಡ್ ಆಟಗಾರ್ತಿಯ ವಿರುದ್ಧ 22-20, 10-21, 18-21 ಅಂತರದಿಂದ ಸೋತರು.