ನವದೆಹಲಿ: ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಭಾರತೀಯ ಕುಸ್ತಿ ಒಕ್ಕೂಟದ ಮೇಲಿನ ನಿಷೇಧವನ್ನು ಮಂಗಳವಾರ ತೆಗೆದುಹಾಕಿದೆ. ಈ ಮೂಲಕ WFI ಒಂದು ರಾಷ್ಟ್ರೀಯ ಕ್ರೀಡಾ ಒಕ್ಕೂಟ(NSF) ಎಂಬ ಮಾನ್ಯತೆಯನ್ನು ಪುನಃಸ್ಥಾಪಿಸಿದೆ.
2023 ಡಿಸೆಂಬರ್ 21ರಂದು ರಂದು ಆಯ್ಕೆಯಾದ ಹೊಸ ಸಂಸ್ಥೆಯ ಆಡಳಿತ ಮತ್ತು ಕಾರ್ಯವಿಧಾನದ ಸಮಗ್ರತೆಯಲ್ಲಿನ ಲೋಪಗಳಿಂದಾಗಿ ಕ್ರೀಡಾ ಸಚಿವಾಲಯ 2023 ರ ಡಿ.24 ರಂದು WFI ಅನ್ನು ಅಮಾನತುಗೊಳಿಸಿತ್ತು.
ಹೊಸದಾಗಿ ಆಯ್ಕೆಯಾದ WFI ಅಧ್ಯಕ್ಷ ಸಂಜಯ್ ಸಿಂಗ್ ಅವರು ಡಿಸೆಂಬರ್ 2023 ರಲ್ಲಿ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ನಂದಿನಿ ನಗರದಲ್ಲಿ U-15 ಮತ್ತು U-20 ರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುವುದಾಗಿ ಘೋಷಿಸಿದ ನಂತರ ಕ್ರೀಡಾ ಸಚಿವಾಲಯವು WFI ಸಂಸ್ಥೆಯನ್ನೇ ಅಮಾನತುಗೊಳಿಸಿತ್ತು.
2023 ರಿಂದ, ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಅವರಂತಹ ಹಲವಾರು ಖ್ಯಾತ ಕುಸ್ತಿಪಟುಗಳು WFI ಮತ್ತು ಅದರ ಮಾಜಿ ಅಧ್ಯಕ್ಷ, ಬಿಜೆಪಿ ನಾಯಕ ಬ್ರಿಜ್ ಭೂಷಣ್ ಸಿಂಗ್ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ಭಾರೀ ಪ್ರತಿಭಟನೆ ನಡೆಸಿದ್ದರು.
WFI ಸೂಕ್ತ ಕ್ರಮಗಳನ್ನು ತೆಗೆದುಕೊಂಡಿರುವುದರಿಂದ ಕ್ರೀಡೆ ಮತ್ತು ಕ್ರೀಡಾಪಟುಗಳ ಹಿತದೃಷ್ಟಿಯಿಂದ ಸಚಿವಾಲಯವು ನಿಷೇಧವನ್ನು ರದ್ದುಗೊಳಿಸಲು ನಿರ್ಧರಿಸಿದೆ ಎಂದು ಕ್ರೀಡಾ ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ.