ಢಾಕಾ: 2025 ರ ಮಹಿಳಾ ಕಬ್ಬಡ್ಡಿ ಫೈನಲ್ (Kabaddi World Cup 2025) ಪಂದ್ಯದಲ್ಲಿ ಭಾರತ ಚೈನೀಸ್ ತೈಪೆ ವಿರುದ್ಧ ಗೆಲುವು ಸಾಧಿಸಿದ್ದು, ಈ ಮೂಲಕ ಸತತ 2ನೇ ಬಾರಿಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
11 ತಂಡಗಳು ಪಾಲ್ಗೊಂಡಿದ್ದ ಟೂರ್ನಿಯಲ್ಲಿ ಅಜೇಯ ಓಟ ಮುಂದುವರೆಸಿದ ಭಾರತ, ನಿರೀಕ್ಷೆಯಂತೆಯೇ ಫೈನಲ್ ನಲ್ಲೂ ಗೆಲುವು ಸಾಧಿಸಿದೆ. ಈ ಮೂಲಕ 13 ವರ್ಷಗಳ ಬಳಿಕ ನಡೆದ ಟೂರ್ನಿಯಲ್ಲಿ ಟ್ರೋಫಿ ತನ್ನದಾಗಿಸಿಕೊಂಡಿದೆ.
ಮೊದಲ ಆವೃತ್ತಿಯು 2012ರಲ್ಲಿ ಭಾರತದಲ್ಲೇ ನಡೆದಿತ್ತು. ಸೆಮಿಫೈನಲ್ ನಲ್ಲಿ ಭಾರತ 33-21ರಲ್ಲಿ ಇರಾನ್ ವಿರುದ್ಧ ಗೆಲುವು ಸಾಧಿಸಿತ್ತು. ಮತ್ತೊಂದೆಡೆ ಬಾಂಗ್ಲಾವನ್ನು ಮಣಿಸಿ ತೈಪೆ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತ್ತು.
ಭಾರತ ಹಾಗೂ ಚೈನೀಸ್ ತೈಪೆ ತಂಡಗಳು ಗ್ರೂಪ್ ಹಂತದಲ್ಲಿ ಅಜೇಯ ಗೆಲುವಿನ ದಾಖಲೆಯನ್ನು ಕಾಯ್ದುಕೊಂಡಿದ್ದವು.
ಭಾರತ ತಂಡವು ‘ಎ’ ಗುಂಪಿನಲ್ಲಿ ಆಡಿರುವ ಎಲ್ಲ 4 ಪಂದ್ಯಗಳಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿತ್ತು. ಚೈನೀಸ್ ತೈಪೆ ‘ಬಿ’ ಗುಂಪಿನಲ್ಲಿ ಎಲ್ಲ ಐದು ಪಂದ್ಯಗಳನ್ನು ಗೆದ್ದುಕೊಂಡಿತ್ತು.