ಬೆಂಗಳೂರು: ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ರಾಜ್ಯದ ಇಬ್ಬರು ಆಟಗಾರ್ತಿಯರಾದ ಧನಲಕ್ಷ್ಮಿ ಮತ್ತು ಲಕ್ಷ್ಯ ರಾಜೇಶ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಸನ್ಮಾನಿಸಿ, ತಲಾ ಐದು ಲಕ್ಷ ರೂ. ನಗದು ಬಹುಮಾನ ಘೋಷಿಸಿದರು.
ಢಾಕಾದಲ್ಲಿ ನಡೆದ ಮಹಿಳಾ ಕಬಡ್ಡಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಚಿನ್ನ ಗೆದ್ದ ಭಾರತ ತಂಡದ ರಾಜ್ಯದ ಆಟಗಾರ್ತಿ ಧನಲಕ್ಷ್ಮಿ ಹಾಗೂ ಚೈನಾದಲ್ಲಿ ನಡೆದ ಕಿರಿಯರ ಏಷ್ಯನ್ ಬ್ಯಾಡ್ಮಿಂಟನ್ ಸಿಂಗಲ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಗೆದ್ದ ಲಕ್ಷ್ಯ ರಾಜೇಶ್ ಅವರನ್ನು ಸಿಎಂ ಸಿದ್ದರಾಮಯ್ಯ ಇಂದು ವಿಧಾನಸೌಧದಲ್ಲಿ ಸನ್ಮಾನಿಸಿದರು.
"ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಕ್ರೀಡಾಪಟುಗಳನ್ನು ಭೇಟಿಯಾಗಿ ಅಭಿನಂದಿಸಿದರು. ಅವರ ಸಾಧನೆಯನ್ನು ಶ್ಲಾಘಿಸಿದರು ಮತ್ತು ಮತ್ತಷ್ಟು ಯಶಸ್ಸು ಸಾಧಿಸಲು ಪ್ರೋತ್ಸಾಹಿಸಿದರು" ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷರಾದ ಮನೋಜ್ ಕುಮಾರ್, ಸಂಚಾಲಕರಾದ ರವೀಂದ್ರ, ಕಾರ್ಯದರ್ಶಿ ರಾಜೇಶ್ ಮತ್ತು ತರಬೇತುದಾರರಾದ ಬಿ.ಎನ್.ಸುಧಾಕರ್ ಅವರುಗಳು ಉಪಸ್ಥಿತರಿದ್ದರು.