ನ್ಯೂಯಾರ್ಕ್: ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ ಅಮಂಡಾ ಅನಿಸಿಮೋವಾ ಅವರನ್ನು ಸೋಲಿಸಿ ಅರಿನಾ ಸಬಲೆಂಕಾ ಚಾಂಪಿಯನ್ ಆಗಿದ್ದಾರೆ. USTA ಬಿಲ್ಲಿ ಜೀನ್ ಕಿಂಗ್ ನ್ಯಾಷನಲ್ ಟೆನಿಸ್ ಸೆಂಟರ್ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಬೆಲಾರಸ್‌ನ ಅರಿನಾ ಸಬಲೆಂಕಾ ಅವರು ವಿಶ್ವದ ಏಳನೇ ಶ್ರೇಯಾಂಕದ ಅಮೆರಿಕದ ಅಮಂಡಾ ಅನಿಸಿಮೋವಾ ಅವರನ್ನು 6-3, 7-6 (7-3) ನೇರ ಸೆಟ್‌ಗಳಿಂದ ಸೋಲಿಸಿದರು. ಈ ಮೂಲಕ ಮತ್ತೊಮ್ಮೆ ಯುಎಸ್ ಓಪನ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ನಂ. 1-ಶ್ರೇಯಾಂಕಿತ ಸಬಲೆಂಕಾ ಹಿಂದಿನ ಪ್ರಶಸ್ತಿ ಪಂದ್ಯಗಳಿಗಿಂತ ಭಿನ್ನವಾಗಿ ಆಡಿದ್ದಾರೆ. ಅನಿಸಿಮೋವಾ ಅವರನ್ನು 6-3, 7-6 (3) ಸೆಟ್‌ಗಳಿಂದ ಸೋಲಿಸಿದರು. 2012-14ರಲ್ಲಿ ಸೆರೆನಾ ವಿಲಿಯಮ್ಸ್ ನಂತರ ಸತತ ವರ್ಷಗಳಲ್ಲಿ ಫ್ಲಶಿಂಗ್ ಮೆಡೋಸ್‌ನಲ್ಲಿ ಟ್ರೋಫಿಯನ್ನು ಗೆದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಸಬಲೆಂಕಾ ಪಾತ್ರರಾಗಿದ್ದಾರೆ.
2024 ರ ಫೈನಲ್ನಲ್ಲಿ ಜೆಸ್ಸಿಕಾ ಪೆಗುಲಾ ಅವೆರನ್ನು ಮಣಿಸಿ ಅರಿನಾ ಸಬಲೆಂಕಾ ಯುಎಸ್ ಓಪನ್ ಕಿರೀಟ ಮುಡಿಗೇರಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷ ಎಂದರೆ 27 ವರ್ಷದ ಅರಿನಾ ಸಬಲೆಂಕಾ ಅವರಿಗೆ ಇದು ನಾಲ್ಕನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯಾಗಿದೆ.
ಇದಕ್ಕೂ ಮುನ್ನ ಅರಿನಾ 2023, 2024ರ ಆಸ್ಟ್ರೇಲಿಯನ್ ಓಪನ್, 2024ರ ಯುಎಸ್ ಓಪನ್ ಗೆದ್ದಿದ್ದರು. ಇದೀಗ ಮತ್ತೊಮ್ಮೆ ಯುಎಸ್ ಓಪನ್ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.