ಮೆಲ್ಬೋರ್ನ್: ಮೆಲ್ಬೋರ್ನ್‌ನಲ್ಲಿ ಶನಿವಾರ ನಡೆದ ಆಸ್ಟ್ರೇಲಿಯನ್ ಓಪನ್ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಕಝಾಕಿಸ್ತಾನ್‌ದ ಎಲೆನಾ ರೈಬಾಕಿನಾ ಅವರು ವಿಶ್ವದ ನಂಬರ್ 1 ಆಟಗಾರ್ತಿ ಅರಿನಾ ಸಬಲೆಂಕಾ ಅವರನ್ನು ಮಣಿಸಿ ತಮ್ಮ ಮೊದಲ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಇಂದು ರಾಡ್ ಲೇವರ್ ಅರೆನಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಎಲೆನಾ ರೈಬಾಕಿನಾ ಅವರು ಬೆಲಾರಸ್ ನ ಅರಿನಾ ಸಬಲೆಂಕಾ ಅವರನ್ನು 6-4, 4-6, 6-4 ಸೆಟ್‌ಗಳ ಅಂತರದಿಂದ ಸೋಲಿಸುವ ಮೂಲಕ 2023 ರಲ್ಲಿ ನಡೆದ ಚಾಂಪಿಯನ್‌ಶಿಪ್ ನಿರ್ಣಾಯಕ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡರು.
2023ರ ಇದೇ ಟೂರ್ನಿಯ ಫೈನಲ್ ನಲ್ಲಿ ಎಲೆನಾ ಅವರು ಅರಿನಾ ಅವರ ವಿರುದ್ಧ ಸೋಲನುಭವಿಸಿದ್ದರು. ಆದರೆ ಈ ಬಾರಿ ಎಲೆನಾ ಗೆಲುವನ್ನು ತಡೆಯಲು ಸಬಲೆಂಕಾಗೆ ಸಾಧ್ಯವಾಗಲಿಲ್ಲ.
ರೈಬಾಕಿನಾ ಅವರು ಮೊದಲ ಸೆಟ್ ಅನ್ನು 6-4 ಅಂತರದಲ್ಲಿ ಗೆದ್ದುಕೊಂಡರು. ನಂತರ ಸಬಲೆಂಕಾ ಎರಡನೇ ಸೆಟ್ ಅನ್ನು 6-4 ಅಂತರದಿಂದ ಗೆಲ್ಲುವ ಮೂಲಕ ಸಮಬಲ ಸಾಧಿಸಿದರು. ಆದರೆ ಮೂರನೇ ಸೆಟ್‌ನಲ್ಲಿ, ಸಬಲೆಂಕಾ ಆರಂಭದಲ್ಲಿ 3-0 ಮುನ್ನಡೆ ಸಾಧಿಸಿದರಾದರೂ ರೈಬಾಕಿನಾ ಅಂತಿಮವಾಗಿ ಸೆಟ್ ಅನ್ನು 6-4 ಅಂತರದಲ್ಲಿ ಗೆದ್ದು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.