ಫೈನಲ್ ಪಂದ್ಯದ ಬಳಿಕ ಮೈದಾನದಲ್ಲೇ ಭಾರಿ ಗಲಾಟೆ 
ಕ್ರೀಡೆ

FIFA World Cup 2026: ಫೈನಲ್ ಪಂದ್ಯ ಮುಗಿಯುತ್ತಿದ್ದಂತೆಯೇ ಕೈಕೈ ಮಿಲಾಯಿಸಿದ ಆಟಗಾರರು; 2 ರೆಡ್ ಕಾರ್ಡ್, ಮೂಕ ಪ್ರೇಕ್ಷಕನಾದ Messi

ಪಂದ್ಯದಲ್ಲೇ ಎನ್ಜೊ ಫರ್ನಾಂಡೆಸ್ ಕೆಂಪು ಕಾರ್ಡ್ ಪಡೆದಿದ್ದರಿಂದ ಅರ್ಜೆಂಟೀನಾ ಒಟ್ಟು ಎರಡು ರೆಡ್ ಕಾರ್ಡ್‌ಗಳೊಂದಿಗೆ ಫೈನಲ್ ಮುಗಿಸಿದ ಹೀನಾಯ ದಾಖಲೆಗೆ ಪಾತ್ರವಾಯಿತು.

ನ್ಯೂಜೆರ್ಸಿ: ಫಿಫಾ ವಿಶ್ವಕಪ್ 2026 ಫೈನಲ್ ಪಂದ್ಯದ ಬಳಿಕ ಸ್ಪೇನ್ ಮತ್ತು ಅರ್ಜೆಂಟೀನಾ ಆಟಗಾರರ ನಡುವೆ ಭಾರೀ ಗಲಾಟೆ ನಡೆದಿದ್ದು, ಉಭಯ ತಂಡದ ಆಟಗಾರರು ಮೆಸ್ಸಿ ಉಪಸ್ಥಿತಿಯಲ್ಲೇ ಪರಸ್ಪರ ಕೈಕೈ ಮಿಲಾಯಿಸಿದ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಹೌದು.. ಫಿಫಾ ವಿಶ್ವಕಪ್ 2026ರ ಫೈನಲ್‌ನಲ್ಲಿ ಸ್ಪೇನ್ ಎದುರು ಅರ್ಜೆಂಟೀನಾ ಸೋಲು ಕಂಡ ಬಳಿಕ ಮೈದಾನದಲ್ಲಿ ಭಾರೀ ಗಲಾಟೆ ನಡೆಯಿತು. ಪಂದ್ಯ ಮುಗಿದ ನಂತರ ಎರಡೂ ತಂಡಗಳ ಆಟಗಾರರ ನಡುವೆ ತಳ್ಳಾಟ-ನೂಕಾಟ ನಡೆದಿದ್ದು, ಈ ವೇಳೆ ಅರ್ಜೆಂಟೀನಾದ ಲಿಯಾಂಡ್ರೊ ಪರೆಡೆಸ್‌ಗೆ ಮತ್ತೊಂದು ರೆಡ್ ಕಾರ್ಡ್ ತೋರಿಸಲಾಯಿತು.

ಪಂದ್ಯದಲ್ಲೇ ಎನ್ಜೊ ಫರ್ನಾಂಡೆಸ್ ಕೆಂಪು ಕಾರ್ಡ್ ಪಡೆದಿದ್ದರಿಂದ ಅರ್ಜೆಂಟೀನಾ ಒಟ್ಟು ಎರಡು ರೆಡ್ ಕಾರ್ಡ್‌ಗಳೊಂದಿಗೆ ಫೈನಲ್ ಮುಗಿಸಿದ ಹೀನಾಯ ದಾಖಲೆಗೆ ಪಾತ್ರವಾಯಿತು.

ಈ ಪಂದ್ಯದ ಸೋಲಿನೊಂದಿಗೆ ಅರ್ಜೆಂಟೀನಾ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿಯ ವಿಶ್ವಕಪ್ ಗೆಲುವಿನೊಂದಿಗೆ ವಿದಾಯ ಹೇಳುವ ಕನಸು ಕೂಡ ನುಚ್ಚು ನೂರಾಯಿತು. 39 ವರ್ಷದ ಲಿಯೋನೆಲ್ ಮೆಸ್ಸಿ ತಮ್ಮ ವೃತ್ತಿಜೀವನದ ಕೊನೆಯ ವಿಶ್ವಕಪ್ ಪಂದ್ಯದಲ್ಲಿ ಎರಡನೇ ಬಾರಿ ಟ್ರೋಫಿ ಎತ್ತುವ ಕನಸು ಕಂಡಿದ್ದರು. ಆದರೆ ಸ್ಪೇನ್‌ನ ಸಂಘಟಿತ ಆಟದ ಮುಂದೆ ಆ ಕನಸು ಭಗ್ನವಾಯಿತು.

ಗೆಲುವಿನ ಗೋಲು ಬಾರಿಸಿದ ಟೊರೆಸ್

ಪಂದ್ಯದ ಹೆಚ್ಚುವರಿ ಸಮಯದ 106ನೇ ನಿಮಿಷದಲ್ಲಿ ಸ್ಪೇನ್ ನ ಫೆರ್ರಾನ್ ಟೊರೆಸ್ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಸ್ಪೇನ್ ಹಾಲಿ ಚಾಂಪಿಯನ್ ಅರ್ಜೆಂಟೀನಾವನ್ನು 1-0 ಗೋಲುಗಳಿಂದ ಮಣಿಸಿ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಬಾರ್ಸಿಲೋನಾ ಸ್ಟ್ರೈಕರ್ ಫೆರ್ರಾನ್ ಟೊರೆಸ್ ಭರ್ಜರಿ ಶಾಟ್ ಮೂಲಕ ಚೆಂಡನ್ನು ಬಲೆಗೆ ಸೇರಿಸಿ ಸ್ಪೇನ್‌ಗೆ ಐತಿಹಾಸಿಕ ಗೆಲುವು ತಂದುಕೊಟ್ಟರು. 120 ನಿಮಿಷಗಳ ಆಟದಲ್ಲಿ ಅರ್ಜೆಂಟೀನಾ ಒಂದು ಬಾರಿಯೂ ಗೋಲು ಗುರಿಯತ್ತ ನಿಖರವಾದ ಶಾಟ್ ದಾಖಲಿಸದಿರುವುದು ಪಂದ್ಯದ ಪ್ರಮುಖ ಅಂಶವಾಗಿತ್ತು.

ಪಂದ್ಯದ ಆರಂಭದಿಂದಲೇ ಸ್ಪೇನ್ ಪ್ರಾಬಲ್ಯ ಮೆರೆದರೆ, ಅರ್ಜೆಂಟೀನಾ ಹಲವು ಬಾರಿ ಕಠಿಣ ಮತ್ತು ಅನಗತ್ಯ ಫೌಲ್‌ಗಳಿಗೆ ಮುಂದಾಯಿತು. ಇದರ ಪರಿಣಾಮವಾಗಿ ಹೆಚ್ಚುವರಿ ಸಮಯದ ಇಂಜುರಿ ವೇಳೆಯಲ್ಲಿ ಸ್ಪೇನ್ ರಕ್ಷಣಾ ಆಟಗಾರ ಪೌ ಕುಬಾರ್ಸಿ ಮೇಲೆ ಅಪಾಯಕಾರಿ ಟ್ಯಾಕಲ್ ಮಾಡಿದ ಎನ್ಜೊ ಫರ್ನಾಂಡೆಸ್‌ಗೆ ನೇರ ರೆಡ್ ಕಾರ್ಡ್ ತೋರಿಸಲಾಯಿತು.

ಗಳಿಸಿದ ಗೋಲು ಅನೂರ್ಜಿತವಾಯ್ತು

ದೀರ್ಘಕಾಲ ಪಂದ್ಯ ಗೋಲುರಹಿತವಾಗಿಯೇ ಸಾಗಿದ್ದು, ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ಗೆ ಪಂದ್ಯವನ್ನು ಕೊಂಡೊಯ್ಯುವ ಸಾಧ್ಯತೆ ಕಾಣಿಸಿತು. ಆದರೆ ಹೆಚ್ಚುವರಿ ವೇಳೆಯಲ್ಲಿ ನಿಕೊ ವಿಲಿಯಮ್ಸ್ ಗಳಿಸಿದ ಗೋಲು ವಿವಾದಾತ್ಮಕವಾಗಿ ರದ್ದಾದ ಬಳಿಕವೂ ಸ್ಪೇನ್ ದಾಳಿ ಮುಂದುವರಿಸಿತು.

ಪೆಡ್ರೊ ಪೊರೊ ನೀಡಿದ ಎತ್ತರದ ಕ್ರಾಸ್ ಅನ್ನು ನಿಕೊ ವಿಲಿಯಮ್ಸ್ ಹೆಡ್ ಮೂಲಕ ಫೆರ್ರಾನ್ ಟೊರೆಸ್‌ಗೆ ತಲುಪಿಸಿದರು. ಅವಕಾಶವನ್ನು ಸದುಪಯೋಗಪಡಿಸಿಕೊಂಡ ಟೊರೆಸ್ ಭರ್ಜರಿ ಶಾಟ್ ಮೂಲಕ ಗೋಲು ಗಳಿಸಿ ಸ್ಪೇನ್‌ಗೆ 2010ರ ಬಳಿಕ ಎರಡನೇ ವಿಶ್ವಕಪ್ ಪ್ರಶಸ್ತಿ ತಂದುಕೊಟ್ಟರು.

ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರು

ಇನ್ನು ಈ ಬಹು ನಿರೀಕ್ಷಿತ ಪಂದ್ಯ ಕಣ್ತುಂಬಿಕೊಳ್ಳಲು ಅಮೆರಿಕದ ಈಸ್ಟ್ ರದರ್‌ಫೋರ್ಡ್‌ನ ಮೆಟ್‌ಲೈಫ್ ಕ್ರೀಡಾಂಗಣದಲ್ಲಿ ದಾಖಲೆಯ ಪ್ರಮಾಣದಲ್ಲಿ ಅಭಿಮಾನಿಗಳು ಸೇರಿದ್ದರು. ಕ್ರೀಡಾಂಗಣದಲ್ಲಿ ನಿನ್ನೆ ಸುಮಾರು 80,663ಕ್ಕೂ ಹೆಚ್ಚು ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದು ವಿಶೇಷವಾಗಿತ್ತು. ಪ್ರಮುಖವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ಗಣ್ಯರು ಪಂದ್ಯ ವೀಕ್ಷಿಸಿದರು.

ಪಂದ್ಯದ ಬಳಿಕ ಭಾರೀ ಗಲಾಟೆ

ಅಂತಿಮ ಸೀಟಿ ಮೊಳಗಿದ ಬಳಿಕ ಲಿಯೋನೆಲ್ ಮೆಸ್ಸಿ ನಿರಾಶೆಯಿಂದ ಮೈದಾನದಲ್ಲೇ ಕುಳಿತಿದ್ದರು. ಇದೇ ವೇಳೆ ಸ್ಪೇನ್‌ನ 19 ವರ್ಷದ ಯುವ ತಾರೆ ಲಮಿನ್ ಯಮಾಲ್ ಮೆಸ್ಸಿ ಬಳಿ ಬಂದು ಕೈಕುಲುಕಿ ಆತ್ಮೀಯವಾಗಿ ಅಪ್ಪಿಕೊಂಡರು. ಈ ದೃಶ್ಯ ಅಭಿಮಾನಿಗಳ ಮನಗೆದ್ದಿತು.

ಆದರೆ ಇನ್ನೊಂದೆಡೆ ಎರಡೂ ತಂಡಗಳ ಆಟಗಾರರ ನಡುವೆ ಉದ್ವಿಗ್ನತೆ ಉಂಟಾಯಿತು. ಅರ್ಜೆಂಟೀನಾ ಮುಖ್ಯ ಕೋಚ್ ಲಿಯೋನೆಲ್ ಸ್ಕಲೋನಿ ಯಾರೊಂದಿಗೋ ವಾಗ್ವಾದ ನಡೆಸಲು ಮುಂದಾಗಿದ್ದ ವೇಳೆ ಸ್ಪೇನ್ ಆಟಗಾರರು ಅವರನ್ನು ತಡೆದರು.

ಇದೇ ವೇಳೆ ಲಿಯಾಂಡ್ರೊ ಪರೆಡೆಸ್ ಸ್ಪೇನ್‌ನ ಎರಿಕ್ ಗಾರ್ಸಿಯಾ ಹಾಗೂ ಗಾವಿ ಅವರನ್ನು ತಳ್ಳಿದರೆ, ನಿಕೊಲಾಸ್ ಒಟಮೆಂಡಿ ಮತ್ತು ರೊಡ್ರಿ ಸೇರಿದಂತೆ ಹಲವು ಆಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಘಟನೆಗೆ ಸಂಬಂಧಿಸಿ ಪರೆಡೆಸ್‌ಗೆ ರೆಡ್ ಕಾರ್ಡ್ ನೀಡಲಾಯಿತು. ಮೈದಾನದಲ್ಲಿ ಇಷ್ಟೆಲ್ಲಾ ಗಲಾಟೆಯಾಗುತ್ತಿದ್ದರೂ ಹಿಂದೆಯೇ ಇದ್ದ ಲಿಯೋನಲ್ ಮೆಸ್ಸಿ ಮೂಕ ಪ್ರೇಕ್ಷಕರಾಗಿ ನೋಡುತ್ತಾ ನಿಂತಿದ್ದರು.

'ಈ ಗೆಲುವು 47 ಮಿಲಿಯನ್ ಸ್ಪೇನ್ ಜನರದ್ದು'

ಗೆಲುವಿನ ಬಳಿಕ ಮಾತನಾಡಿದ ಫೆರ್ರಾನ್ ಟೊರೆಸ್, "ಈ ಗೋಲು ನನ್ನದು ಅಥವಾ ನಮ್ಮ 26 ಆಟಗಾರರದ್ದಲ್ಲ. ಇದು 47 ಮಿಲಿಯನ್ ಸ್ಪೇನ್ ಜನರ ಗೆಲುವು. ವಿಶ್ವಕಪ್ ಫೈನಲ್‌ಗಳು ಯಾವಾಗಲೂ ಕಠಿಣವಾಗಿರುತ್ತವೆ. ಮೆಸ್ಸಿಯಂತಹ ಆಟಗಾರ ಎದುರಿದ್ದಾಗ ಸಹಜವಾಗಿಯೇ ಒತ್ತಡ ಇರುತ್ತದೆ. ಆದರೆ ನಮ್ಮ ಫುಟ್‌ಬಾಲ್ ಹಾಗೂ ನಮ್ಮ ಮೇಲಿನ ನಂಬಿಕೆಯನ್ನು ನಾವು ಎಂದಿಗೂ ಕಳೆದುಕೊಳ್ಳಲಿಲ್ಲ," ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CJP Protest LIVE Updates | ಮುಂದುವರೆದ CJP ಪ್ರತಿಭಟನೆ: ನಿಮ್ಮನ್ನು ರಕ್ಷಿಸಲು ಇನ್ನಷ್ಟು ಮಾಡಬಹುದಿತ್ತು; ಗಾಯಗೊಂಡ ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಿದ ಅಭಿಜೀತ್ ದೀಪ್ಕೆ

ನಾಳೆ ಸಂಪುಟ ವಿಸ್ತರಣೆ ಬಹುತೇಕ ಫಿಕ್ಸ್?: ಒಂದೇ ವಿಮಾನದಲ್ಲಿ ದೆಹಲಿಗೆ ಹಾರಿದ ಮೂವರು ನಾಯಕರು; Video

ಸಿಕ್ಕಿಂನಲ್ಲಿ ಭೀಕರ ದುರಂತ: ಸುರಂಗದಲ್ಲಿ ಸ್ಫೋಟ-ಭೂಕುಸಿತ; 10 ಕಾರ್ಮಿಕರ ಸಾವು, 27 ಮಂದಿಗಾಗಿ ಮುಂದುವರೆದ ರಕ್ಷಣಾ ಕಾರ್ಯಾಚರಣೆ..!

ಹಳಿ ತಪ್ಪಿದ ಗೂಡ್ಸ್ ರೈಲು; ಸಂಚಾರ ಭಾರೀ ಅಸ್ತವ್ಯಸ್ತ; 85ಕ್ಕೂ ಹೆಚ್ಚು ರೈಲುಗಳು ರದ್ದು, ಮಾರ್ಗ ಬದಲಾವಣೆ!

West asia war: ಸೈನಿಕರ ಸಾವಿಗೆ ಹಲವು ಪಟ್ಟು ಬೆಲೆ ತೆರುತ್ತೀರಿ; Trump ಎಚ್ಚರಿಕೆ ಬೆನ್ನಲ್ಲೇ Iran ಮೇಲೆ ಅಮೆರಿಕಾ ಭಾರೀ ವೈಮಾನಿಕ ದಾಳಿ..!