ನವದೆಹಲಿ: ಸ್ಪಾನಿಶ್ ಟೆನ್ನಿಸ್ ಆಟಗಾರ ರಾಫೆಲ್ ಜೋಡಾರ್ ವಿರುದ್ಧ ಬಾಲ್ ಗರ್ಲ್ ಳನ್ನು ತಳ್ಳಿದ ಗಂಭೀರ ಆರೋಪ ಕೇಳಿಬಂದಿದ್ದು, ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ರೋಲ್ಯಾಂಡ್ ಗಾರೋಸ್ (Roland Garros) ಗ್ರ್ಯಾಂಡ್ ಸ್ಲಾಮ್ ಟೂರ್ನಿಯ ಮೂರನೇ ಸುತ್ತಿನ ಪಂದ್ಯದಲ್ಲಿ, 19 ವರ್ಷದ ಸ್ಪೈನ್ ನ ಜೋಡರ್ ಅಮೆರಿಕದ ಅಲೆಕ್ಸ್ ಮಿಚೆಲ್ಸನ್ (Alex Michelsen) ಅವರನ್ನು ಐದು ಸೆಟ್‌ಗಳ ರೋಚಕ ಹೋರಾಟದಲ್ಲಿ ಮಣಿಸಿದರು.
ಮೇ 29, 2026ರಂದು ಪ್ಯಾರಿಸ್‌ನ Stade Roland Garros ಕ್ರೀಡಾಂಗಣದ ಮಣ್ಣಿನ ಕೋರ್ಟ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಜೋಡರ್ 7-6(2), 6-7(5), 4-6, 6-3, 6-3 ಅಂತರದಿಂದ ಜಯ ಸಾಧಿಸಿದರು.
ಸ್ಪೇನ್‌ನ ಯುವ ಟೆನಿಸ್ ಆಟಗಾರ ರಾಫೆಲ್ ಜೋಡರ್ ತಮ್ಮ ವೃತ್ತಿಜೀವನದ ಇದುವರೆಗಿನ ಅತ್ಯಂತ ಕಠಿಣ ಪಂದ್ಯಗಳಲ್ಲಿ ಒಂದನ್ನು ಗೆದ್ದು, ರೋಲಾಂಡ್ ಗ್ಯಾರೋಸ್ ಟೂರ್ನಿಯ ಪ್ರೀ-ಕ್ವಾರ್ಟರ್‌ಫೈನಲ್ (ರೌಂಡ್ ಆಫ್ 16) ಹಂತಕ್ಕೆ ಪ್ರವೇಶಿಸಿದ್ದಾರೆ.
ಬಾಲ್ ಗರ್ಲ್ ಳನ್ನೇ ತಳ್ಳಿದ ಆಟಗಾರ
ಇನ್ನು ಈ ಪಂದ್ಯದ ವೇಳೆ ನಡೆದ ಘಟನೆಯೊಂದು ಇದೀಗ ಜಗತ್ತಿನಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ. ಪಂದ್ಯದ ನಡುವೆ ಸ್ಪೈನ್ ಆಟಗಾರ ಜೋಡರ್ ಬಾಲ್ ಗರ್ಲ್ ಳನ್ನು ತಳ್ಳಿದ್ದಾರೆ ಎಂಬ ಗಂಭೀರ ಕೇಳಿಬಂದಿದೆ. ಇದಕ್ಕೆ ಇಂಬು ನೀಡುವಂತೆ ವಿಡಿಯೋವೊಂದು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಲ್ಲದೆ ಟೆನ್ನಿಸ್ ಆಟಗಾರನ ವಿರುದ್ಧ ಟೀಕೆಗಳೂ ವ್ಯಕ್ತವಾಗುತ್ತಿವೆ.
ನಾನ್ ತಳ್ಳಿಲ್ಲ ಎಂದ ರಾಫೆಲ್ ಜೋಡರ್
ಇನ್ನು ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಒಬ್ಬ ವರದಿಗಾರ ಈ ವಿಷಯವನ್ನು ಪ್ರಸ್ತಾಪಿಸಿದರು. ಅದಕ್ಕೆ ಜೋಡರ್ ತೀವ್ರವಾಗಿ ಪ್ರತಿಕ್ರಿಯಿಸಿ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದರು. ತಾವು ಬಾಲ್ ಗರ್ಲ್‌ರನ್ನು ತಳ್ಳಿಲ್ಲ. ಇನ್ನೂ ಖಚಿತವಾಗಿ ಹೇಳಬೇಕು ಎಂದರೆ ಆಕೆಯನ್ನು ನಾನು ಸ್ಪರ್ಶ ಕೂಡ ಮಾಡಿಲ್ಲ ಎಂದು ಜೋಡರ್ ಸ್ಪಷ್ಟಪಡಿಸಿದರು.
ಹಾಗಾದ್ರೆ ಆಗಿದ್ದೇನು? ಆಕೆ ಏಕೆ ಬಿದ್ದರು?
ಅಂತೆಯೇ ತಮ್ಮ ಉತ್ತರ ಮುಂದುವರೆಸಿದ ಜೋಡರ್, 'ಶೌಚಾಲಯ ವಿರಾಮದ ವೇಳೆ ತಮ್ಮ ತಂದೆಯಿಂದ ಏನನ್ನೋ ಪಡೆಯಲು ಹೋಗುತ್ತಿದ್ದಾಗ, ಆ ಬಾಲ್ ಗರ್ಲ್ ನೆಲದಲ್ಲಿ ಸುತ್ತಿ ಇಡಲಾಗಿದ್ದ ತಾರ್ಪಾಲಿನ್ ಮೇಲೆ ಕಾಲು ಜಾರಿ ಬಿದ್ದಳು' ಎಂದು ಅವರು ವಿವರಿಸಿದರು.
ಕ್ಯಾಮೆರಾ ಆ್ಯಂಗಲ್ ಎಡವಟ್ಟು
ಅಂದಹಾಗೆ ಇವಿಷ್ಟೂ ವಿವಾದಕ್ಕೆ ಕಾರಣವಾಗಿದ್ದು ವೈರಲ್ ವಿಡಿಯೋ ಮತ್ತು ಕ್ಯಾಮೆರಾ ಆ್ಯಂಗಲ್.. ಜೋಡರ್ ಹೇಳುವುದೇನೆಂದರೆ, ಟೆನಿಸ್ ಬಾಲ್‌ಗಳನ್ನು ತಂದುಕೊಡುವ ಕೆಲಸ ಮಾಡುತ್ತಿದ್ದ ಆ ಬಾಲ್ ಗರ್ಲ್‌ರನ್ನು ತಾವು ತಳ್ಳಿಲ್ಲ. ಆದರೆ ವರದಿಗಾರರಿಗೆ ದೃಶ್ಯ ನೋಡಿದಾಗ ಅವರು ತಳ್ಳಿದಂತೆ ಕಾಣಿಸಿದ್ದರಿಂದಲೇ ಈ ಪ್ರಶ್ನೆಯನ್ನು ಕೇಳಿದರು ಎಂದು ಹೇಳಿದ್ದಾರೆ.
ಅಂತೆಯೇ ವಿಡಿಯೋವನ್ನೂ ಸೂಕ್ಷ್ಮವಾಗಿ ಪರಿಶೀಲಿಸಿದರೆ, ಜೋಡರ್ ಅವಳನ್ನು ತಳ್ಳಿದ್ದಾರೆ ಎಂದು ಹೇಳಲು ಯಾವುದೇ ಆಧಾರ ಕಂಡುಬರುವುದಿಲ್ಲ. ಅವರು ಆಕೆಯನ್ನು ತಳ್ಳಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಇದು ಕೇವಲ ಸಮಯದ ಹೊಂದಾಣಿಕೆ ಮತ್ತು ದೃಷ್ಟಿಕೋನದ ಗೊಂದಲದ ವಿಷಯವಾಗಿದೆ. ಜೋಡರ್ ಅವರ ಕೈ ಬಾಲ್ ಗರ್ಲ್‌ಗೆ ತಾಗಿರುವುದೇ ಇಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ ಘಟನೆಯ ಸಮಯ ಮತ್ತು ದೃಶ್ಯದ ಆಳವನ್ನು ಸರಿಯಾಗಿ ಅಂದಾಜು ಮಾಡಲು ಆಗದ ಕಾರಣ, ಮೊದಲ ಬಾರಿ ನೋಡಿದಾಗ ಅವರು ತಳ್ಳಿದಂತೆ ಕಾಣಿಸಬಹುದು.