ಅಂಬಿಕೆಯ ಅಂತರಂಗ
ಭರತಖಂಡದ ಹೆಣ್ಣು ಮಕ್ಕಳು ಹೇಗಿರಬೇಕು, ಹೇಗಿರಬಾರದು? ಹೆಣ್ಣು ಮಕ್ಕಳನ್ನು ಹೇಗೆ ನಡೆಸಿಕೊಳ್ಳಬೇಕು, ಹೇಗೆ ನಡೆಸಿಕೊಳ್ಳಬಾರದು? ನಡೆಸಿಕೊಳ್ಳಬಾರದ ರೀತಿಯಲ್ಲಿ ನಡೆಸಿಕೊಂಡರೆ ಪರಿಣಾಮ ಏನಾಗುತ್ತದೆ? ಎಂಬೆಲ್ಲದರ ಸಾಕ್ಷಿಯಾದ ನನ್ನ ಜೀವನವನ್ನು ನಿಮ್ಮ ಮುಂದಿಡುತ್ತಿದ್ದೇನೆ. ಒಪ್ಪಿಸಿಕೊಳ್ಳಿ...
ಕಾಶೀರಾಜನ ಮೂವರು ಹೆಣ್ಣು ಮಕ್ಕಳಲ್ಲಿ ನಾನು ಎರಡನೆಯವಳು. ಅಕ್ಕ ಅಂಬೆಯಷ್ಟು ಧೈರ್ಯಸ್ಥೆಯೂ ಅಲ್ಲ, ತಂಗಿ ಅಂಬಾಲಿಕೆಯಷ್ಟು ಮುಗ್ಧೆಯೂ ಅಲ್ಲ. ನಮ್ಮೂರಿನ ನಮ್ಮ ಸ್ವಯಂವರದಲ್ಲಿ ನಮಗೆ ಸೂಕ್ತವಾದ ರಾಜಕುಮಾರ ಯಾರೆಂದು ಹೇಗೆ ನಿರ್ಧರಿಸುವುದು? ನಮ್ಮ ಮುಂದಿನ ಬಾಳು ಹಸನಾಗುವುದೇ? ಮುಂತಾದ ಪ್ರಶ್ನೆಗಳ ಜೊತೆ ಜೊತೆಯಲ್ಲಿ, ವೈವಾಹಿಕ ಜೀವನದ ರಮ್ಯ ಕಲ್ಪನೆಯಲ್ಲಿ ನಾವಿದ್ದಾಗ, ಅದೆಲ್ಲಿಂದ ಬಂದನೋ ಭೀಷ್ಮ... ಆಗಂತುಕ... ಆಮಂತ್ರಣವೇ ಇಲ್ಲದೇ ಬಂದವನು... ನೆರೆದಿದ್ದ ರಾಜರುಗಳನ್ನೆಲ್ಲ ಸೋಲಿಸಿ, ನಮ್ಮ ಬಾಳನ್ನು ತನ್ನ ವಶಕ್ಕೆ ತೆಗೆದುಕೊಂಡು ಬಿಟ್ಟ. ನಮ್ಮಪ್ಪ ಕಾಶಿರಾಜ, ಭೀಷ್ಮನಿಗೆ ಎದುರಾಡಲಾಗದೆ ನಮ್ಮನ್ನು ಆತನ ಕೈಗೊಪ್ಪಿಸಿದ. ನಮ್ಮ ಇಷ್ಟ-ಕಷ್ಟ-ಅನಿಷ್ಟ ಎಲ್ಲವೂ ಭೀಷ್ಮನನ್ನೇ ಅವಲಂಬಿಸಿಬಿಟ್ಟವು. ನಂತರ ನಡೆದದ್ದೇನು? ನಮ್ಮ ಇಷ್ಟ-ಕಷ್ಟಗಳನ್ನು ಕೇಳುವವರ್ಯಾರಿದ್ದರು? ಒಂದು ರಾಜ್ಯದ ರಾಜಕುಮಾರಿಯರಾದರೂ ಸಾಮಾನ್ಯ ಪ್ರಜೆಗಳಿಗಿರುವ ಸ್ವಾತಂತ್ರ ನಮಗಿಲ್ಲದೇ ಹೋಯಿತು.
ಅಕ್ಕನಾದ ಅಂಬೆ ಸ್ವಯಂವರಕ್ಕಿಂತ ಮೊದಲೇ ಸಾಲ್ವ ಮಹಾರಾಜನಿಗೆ ಮನಸೊಪ್ಪಿಸಿ, ತಂದುಕೊಂಡಂತಹ ಆಪತ್ತು ಯಾರಿಗೆ ತಾನೇ ಗೊತ್ತಿಲ್ಲ? ಅಕ್ಕನ ಬಾಳು ನಮ್ಮ ಕಣ್ಣೆದುರೇ ಹೀಗಾದದ್ದನ್ನು ಕಂಡು ನಾನು-ಅಂಬಾಲಿಕೆ ಬೆದರಿಹೋಗಿದ್ದೆವು. ನಾನು ಮತ್ತು ಅಂಬಾಲಿಕೆ ವಿಚಿತ್ರವೀರ್ಯನ ಕೈಹಿಡಿಯಬೇಕಾಯಿತು. ಆತ ಮೊದಲೇ ಅನಾರೋಗ್ಯದ ಮನುಷ್ಯ. ಸತ್ಯ ಹೇಳಿಬಿಡುತ್ತೇನೆ. ಒಂದು ವೇಳೆ ಈ ವಿಚಿತ್ರವೀರ್ಯನೇ ನಮ್ಮ ಸ್ವಯಂವರಕ್ಕೆ ಬಂದಿದ್ದರೆ ನಾವಂತೂ ಆತನ ಕೊರಳಿಗೆ ಹೂ ಮಾಲೆ ಹಾಕುವ ಸಾಧ್ಯತೆಗಳಿರಲಿಲ್ಲ. ವಿಧಿಯಾಟದ ಮುಂದೆ ಯಾರದ್ದೇನು? ಜಾಣ ಭೀಷ್ಮ... ಉಪಾಯವಾಗಿ ನಮ್ಮನ್ನು ಹಸ್ತಿನಾವತಿಗೆ ಕರೆ ತಂದ. ತಮ್ಮ ವಿಚಿತ್ರವೀರ್ಯನೊಡನೆ ನಮ್ಮಿಬ್ಬರ ವಿವಾಹವನ್ನು ನೆರವೇರಿಸಿದ.
ಅನಾರೋಗ್ಯದಿಂದ ವಿಚಿತ್ರವೀರ್ಯ ಸತ್ತಾಗ ನನಗೆ ಏನನ್ನಿಸಿತ್ತು? ಏನೂ ಅನ್ನಿಸಲಿಲ್ಲ... ಮೊದಲೇ ಒಲ್ಲದ ಮದುವೆ-ಒಲ್ಲದ ಗಂಡ. ಯಾವುದನ್ನೂ- ಯಾರನ್ನೂ ಎದುರಿಸಲಾಗದ ಅಸಹಾಯಕತೆ. ವಿಧಿಯ ಮೇಲೆ ಭಾರ ಹಾಕಿ ಕುಳಿತುಬಿಟ್ಟಿದ್ದೆ ...
ಇತ್ತ ಗಂಡ ಸತ್ತಿದ್ದ. ಅತ್ತ ಅತ್ತೆ ಸತ್ಯವತಿ, ಆಕೆಯ ಹಿರಿಮಗ ವೇದವ್ಯಾಸರನ್ನು ಕರೆಸಿದರು, ನಿಯೋಗಕ್ಕಾಗಿ. ಕಡೇ ಪಕ್ಷ ನಮ್ಮ ಅಭಿಪ್ರಾಯವನ್ನಾದರೂ ಕೇಳಬೇಕಿತ್ತಲ್ಲವೇ? ನಾವು ಮೊದಲು ಮಾನಸಿಕ ಸಿದ್ಧತೆಯನ್ನಾದರೂ ಮಾಡಿಕೊಳ್ಳಬೇಕಿತ್ತಲ್ಲವೇ? ನಾವು ಈ ನಿಯೋಗವನ್ನು ತೀವ್ರವಾಗಿಯೇ ವಿರೋಧಿಸಿದೆವು. ಆದರೇನು? ಕುರುಕುಲದ ಅಭಿವೃದ್ಧಿಗಾಗಿ, ಸಂತಾನ ಪ್ರಾಪ್ತಿಗಾಗಿ, ಈ ನಿರ್ಧಾರ ಅತ್ಯಂತ ಅಗತ್ಯ-ಸಮಂಜಸ ಮತ್ತು ಅದು ನಮ್ಮೆಲ್ಲರ ಕರ್ತವ್ಯ ಎಂದು ರಾಜಮಾತೆ ಸತ್ಯವತಿ ಆದೇಶಿಸಿ, ನಮ್ಮ ಬಾಯಿ ಮುಚ್ಚಿಸಿದರು.
ವ್ಯಾಸಮಹರ್ಷಿಗಳಾದರೋ ಮಹಾ ತಪಸ್ವಿಗಳು. ಉತ್ತಮ ಸಂತಾನಕ್ಕಾಗಿ ನನಗಷ್ಟು ಕಾಲಾವಕಾಶ ಕೊಡಿ ಎಂದು ರಾಜಮಾತೆಯವರಲ್ಲಿ ಕೇಳಿಕೊಂಡರು.
ರಾಜಮಾತೆ ಸತ್ಯವತಿ ಅಂದು ಸ್ವಲ್ಪ ಸಂಯಮದಿಂದ ವರ್ತಿಸಿದ್ದಿದ್ದರೆ ನಮ್ಮ ಕುಲದ ಕತೆಯೇ ಬೇರೆಯಾಗುತ್ತಿತ್ತು. ವ್ಯಾಸರಿಗೊಂದಿಷ್ಟು ಕಾಲಾವಕಾಶ ಕೊಟ್ಟಿದ್ದರೆ ನನಗೂ-ಅಂಬಾಲಿಕೆಗೂ ನಿಯೋಗದ ಬಗ್ಗೆ- ಸಂತಾನದ ಬಗ್ಗೆ ನಮ್ಮ ಮನೋಭೂಮಿಕೆ ಸಿದ್ಧಪಡಿಸಿಕೊಳ್ಳಲು ಸಮಯಾವಕಾಶ ದೊರೆಯುತ್ತಿತ್ತು. ಆದರೆ ವಿಧಿಯಾಟ ಬೇರೆಯೇ ಇತ್ತಲ್ಲ. ಅಂಬಾಲಿಕೆ ಅನಿವಾರ್ಯ ಪರಿಸ್ಥಿತಿಯಲ್ಲಿ ವ್ಯಾಸರನ್ನು ಕೂಡುವಾಗ ಬೆದರಿದಳಂತೆ. ಆದರೆ ಮತ್ತವಳು ನಡೆದ ಘಟನೆಯನ್ನು ತನ್ನ ಎಂದಿನ ಮುಗ್ಧತೆಯಿಂದ ಸ್ವೀಕರಿಸಿಬಿಟ್ಟಳು. ಹಾಗೆ ಅವಳ ಮಗ ಪಾಂಡು ನೋಡುವುದಕ್ಕೆ ಬಿಳಚಿಕೊಂಡಂತೆ ಇದ್ದರೂ ಧರ್ಮಿಷ್ಠನಾದ, ಸ್ಥಿರಚಿತ್ತವುಳ್ಳ ಸಮಾಧಾನಿಯಾದ.
ನಾನಾದರೋ, ವ್ಯಾಸರನ್ನು ಕೂಡುವ ಪೂರ್ವದಲ್ಲಿ -ಅಂದರೆ ಯಾವ ಕ್ಷಣದಲ್ಲಿ ರಾಜಮಾತೆ ಸತ್ಯವತಿಯವರು ನಿಯೋಗಕ್ಕಾಗಿ ವ್ಯಾಸರನ್ನು ಕರೆಸಲಾಗಿದೆ -ಸಿದ್ಧರಾಗಿ ಎಂದು ಆದೇಶಿಸಿದರಲ್ಲ - ಆ ಕ್ಷಣದಿಂದಲೇ ತೀವ್ರವಾಗಿ ಅಸಮಾಧಾನಗೊಂಡಿದ್ದೆ. ನನ್ನಲ್ಲಿ ಆಕ್ರೋಶ -ಅಸಹಾಯಕತೆ. ಆದರೇನು ಮಾಡಲಿ? ನಾನು ವಿಧಿಯ ಕೈಗೊಂಬೆ. ಒಂದು ರೀತಿಯ ಮಾನಸಿಕ ಅತ್ಯಾಚಾರ- ದೈಹಿಕ ಅತ್ಯಾಚಾರ ಅನುಭವಿಸಬೇಕಾದ, ಅನುಭವಿಸಿದ ನನ್ನ ಬಗ್ಗೆಯೇ ನನಗೆ ಹೀಕರಿಕೆ. ಎಲ್ಲವನ್ನೂ ಕಣ್ಮುಚ್ಚಿ ಸ್ವೀಕರಿಸಿದೆ. ಮನಸ್ಸಿಲ್ಲದ ಮನಸ್ಸಿನಿಂದ ಎಂದು ಪ್ರತ್ಯೇಕ ಹೇಳಬೇಕಿಲ್ಲ ತಾನೆ? ಹೊಟ್ಟೆಯಲ್ಲಿದ್ದ ಮಗುವಿನ ಬಗ್ಗೆ ನನಗಿಂತ ಹೆಚ್ಚಾಗಿ ಉಳಿದವರು ಅಸ್ಥೆ ವಹಿಸಿದರು. ನನ್ನ ಆರೋಗ್ಯ-ಸುಖ-ಸಂತೋಷ-ಸಂಭ್ರಮಕ್ಕಿಂತ ಎಲ್ಲರಿಗೂ ಮಗುವಿನ ಬಗ್ಗೆಯೇ ಗಮನ. ನನಗೋ ಒಲ್ಲದ ಸಂಗ-ಒಲ್ಲದ ಗರ್ಭ. ಹೇಳುವಂತಿಲ್ಲ, ಅನುಭವಿಸುವಂತಿಲ್ಲ. ಅಂತೂ ದೃತರಾಷ್ಟ್ರ ಈ ಭುವಿಗೆ ಬಂದಿದ್ದ!!
ನನ್ನ ಮನಸ್ಸಿನ ತಲ್ಲಣ- ನನ್ನ ಸ್ವಾತಂತ್ರ ಹರಣವಾದ ಬಗ್ಗೆ ಈ ಪ್ರಪಂಚದ ಮೇಲಿದ್ದ ನನ್ನ ದ್ವೇಷ-ಅಸಹನೆ ಇದೆಲ್ಲದರ ಮೂರ್ತ ರೂಪವೇ ದೃಷ್ಟಿಹೀನ-ದೃಢಚಿತ್ತವಿಲ್ಲದ ನನ್ನ ರಕ್ತ ಮಾಂಸಗಳನ್ನು ಹಂಚಿಕೊಂಡ ನನ್ನ ಮಗ ದೃತರಾಷ್ಟ್ರ. ಕುರುಕುಲದಲ್ಲಿ ಈಗಾಗುತ್ತಿರುವ ವಿಪ್ಲವಗಳಿಗೆ ನೀನೂ ಕಾರಣ ಎಂದು ಬೇರಾರೂ ಹೇಳದಿದ್ದರೂ ನನ್ನ ಆತ್ಮಸಾಕ್ಷಿ ಚುಚ್ಚುತ್ತಿದೆ. ಆದರೇನು ಮಾಡಲಿ? ಬೆಳೆದು ಕುರುಕುಲ ಸಿಂಹಾಸನದಲ್ಲಿ ಪವಡಿಸಿ-ಕುರುಕುಲಕ್ಕಾಗಿ ತನ್ನ ಸ್ವಂತ ಸುಖಗಳನ್ನೆಲ್ಲ ತ್ಯಾಗ ಮಾಡಿದ ಮಹಾತ್ಮ ಭೀಷ್ಮ- ನೀತಿವಂತನಾದ ವಿದುರರನ್ನೇ ಎದುರುಹಾಕಿಕೊಂಡು- ದುರಾಚಾರಿ ಶಕುನಿ ಕುಣಿಸಿದಂತೆ ಕುಣಿಯುತ್ತಿದ್ದಾನೆ ನನ್ನ ಮಗ ದೃತರಾಷ್ಟ್ರ. ಅವನಿಗೆ ತಕ್ಕಂತೆಯೇ ಅವನ ಮಕ್ಕಳು.
ಗರ್ಭವತಿಯಾದ ಹೆಣ್ಣಿನ ಮನಸ್ಸು ಹೇಗಿರುತ್ತದೆಯೋ- ಅದರಂತೆ ಆಕೆಯ ಹೊಟ್ಟೆಯೊಳಗಿನ ಮಗು ರೂಪುಗೊಳ್ಳುತ್ತದೆ ಎಂಬ ಮಾತು ನೂರಕ್ಕೆ ನೂರರಷ್ಟು ನಿಜ. ಅಪ್ಪನಿಂದ ಬಂದ ಧಾತು ಶುದ್ಧವಾಗಿದ್ದರೂ ಅಮ್ಮನಿಂದಾಗಿ ಮುಂದಿನ ಸಂತಾನ ಫಲ ವಿಫಲತೆ ಹೊಂದಬಹುದು ಎನ್ನುವುದಕ್ಕೆ ನಾನೇ ಸಾಕ್ಷಿಯಾಗಿಹೋದೆ. ಅಪ್ಪನಿಂದ ಸಿಕ್ಕ ಧಾತು ಶುದ್ಧ ಮಾತೃ ಭೂಮಿಕೆಯಲ್ಲಿ ಉತ್ತಮ ಸಂತಾನವಾಗಿ ಹೊರಹೊಮ್ಮುತ್ತದೆ ಎಂಬುದನ್ನು ನನ್ನ ದಾಸಿ ಧರ್ಮಾತ್ಮನಾದ ವಿದುರನನ್ನು ಹೆತ್ತು ತೋರಿಸಿಕೊಟ್ಟುಬಿಟ್ಟಳು.
ಇತ್ತೀಚೆಗೆ ಅಂಬಾಲಿಕೆಯ ಮಗ ಪಾಂಡು ಅಕಾಲ ಮೃತ್ಯುವನ್ನು ಹೊಂದಿದನಂತೆ. ಆತನ ಕಿರಿಯ ರಾಣಿ ಮಾದ್ರಿ ಸಹಗಮನವನ್ನು ಮಾಡಿದಳಂತೆ. ಪಾಂಡುವಿನ ಹಿರಿಯ ರಾಣಿ ಕುಂತಿ ಮತ್ತು ಆಕೆಯ ಐದು ಮಕ್ಕಳು ಹಸ್ತಿನಾವತಿಗೆ ಬಂದಿದ್ದಾರೆ. ಇಂದು ನಾನು ಕುಂತಿಯನ್ನು ಕಂಡು ಮಾತನಾಡಿಸಿದೆ. ಆಕೆ ಪಾಂಡು-ಮಾದ್ರಿಯರೊಂದಿಗೆ ಹಸ್ತಿನಾವತಿ ತೊರೆದು ಹೋದ ನಂತರದ ಕತೆಯನ್ನು ಇಂಚಿಂಚಾಗಿ ಕೇಳಿ ತಿಳಿದುಕೊಂಡೆ. ಬೇಡವೆಂದರೂ ಮನಸ್ಸು ನನ್ನನ್ನೂ- ಕುಂತಿಯನ್ನೂ ಹೋಲಿಸಿ ನೋಡುತ್ತಿದೆ.
ಕುಂತಿ ಚಿಕ್ಕ ಪ್ರಾಯದವಳಾದರೂ ಪ್ರಬುದ್ದ ಬುದ್ಧಿಯವಳು. ದೂರ್ವಾಸರ ಮಂತ್ರೋಪದೇಶದ ಮೂಲಕ ಮಕ್ಕಳನ್ನು ಪಡೆಯುವ ಸಂದರ್ಭದಲ್ಲಿ ಪಾಂಡು ಮತ್ತು ಕುಂತಿ ಇಬ್ಬರಿಗೂ ತಮಗೆ ಹುಟ್ಟುವ ಮಕ್ಕಳು ಹೀಗೇ ಇರಬೇಕು ಎಂಬ ಸ್ಪಷ್ಟ ಕಲ್ಪನೆ ಇತ್ತು. ಗಂಡ ಹೆಂಡತಿ ಇಚ್ಚಿಸಿ-ಪಡೆದು-ಬೆಳೆಸಿದ ಸಂತಾನವೂ ಧನ್ಯ.
ಪ್ರಪಂಚದ ಜನರೇ ಕೇಳಿ... ಹೆಣ್ಣೊಂದನ್ನು ಮನೆ-ಮನ ತುಂಬಿಸಿಕೊಳ್ಳುವ ಮುನ್ನ ಆಕೆಯ ಒಪ್ಪಿಗೆ ಪಡೆಯಿರಿ... ಗೃಹಲಕ್ಷ್ಮಿಯಾಗಿ ಆಕೆಯನ್ನು ಆಧರಿಸಿ, ಇಬ್ಬರಿಗೂ ಬೇಕೆನಿಸಿದಾಗ ಮಾತ್ರ ನಿಮ್ಮ ವಂಶ ವೃದ್ಧಿಯಾಗಲಿ. ವಂಶೋದ್ಧಾರಕನಿಗಾಗಿಯಲ್ಲದೇ- ಆಕೆಗಾಗಿಯೂ ನಿಮ್ಮ ಮನ ಮಿಡಿಯಲಿ... ಅವಳು ಸಂತೋಷವಾಗಿದ್ದರಷ್ಟೇ ನಿಮ್ಮ ಮುಂದಿನ ಪೀಳಿಗೆ ಉತ್ತಮವಾಗಿರುತ್ತದೆ ಎಂಬ ಪಾಠವನ್ನು ನನ್ನ ಬದುಕನ್ನು ನೋಡಿಯಾದರೂ ತಿಳಿದುಕೊಳ್ಳಿ...
ಇಂತಿ ನಿಮ್ಮ ಅಂಬಿಕೆ
-ಸುರೇಖಾ ಭಟ್, ಭೀಮಗುಳಿ