ಬೈಟುಕಾಫಿ

ಕಳ್ಳ ಕೃಷ್ಣ

ಕಳೆದರೆ ಬಾಲ್ಯವನ್ನಿಲ್ಲಿ ಕಳೆಯಬೇಕೆಂದು ಅನ್ನಿಸುವ ರಮ್ಯಮಧುರಲೋಕ ಈ ಗೋಕುಲ!

ಕಳೆದರೆ ಬಾಲ್ಯವನ್ನಿಲ್ಲಿ ಕಳೆಯಬೇಕೆಂದು ಅನ್ನಿಸುವ ರಮ್ಯಮಧುರಲೋಕ ಈ ಗೋಕುಲ! ಕೃಷ್ಣನಂಥ ಕೃಷ್ಣನೇ ತನ್ನ ತೊದಲುನುಡಿಯ, ಅಂಬೆಗಾಲಿನ ವಯಸ್ಸನ್ನು ಇಲ್ಲಿ ಕಳೆದನೆಂದ ಮೇಲೆ ಕೇಳಬೇಕೆ! ಸಾಕುತಾಯಿ ಯಶೋದೆಗೆ ಬ್ರಹ್ಮಾಂಡ ತೋರಿಸುವ ತುಂಟ, ರಾಧೆಯ ಕೈಹಿಡಿದು ಪ್ರೇಮದ ಹೊಸ ಎತ್ತರಕ್ಕೆ ಕರೆದೊಯ್ಯುತ್ತಾನೆ. ಕಂಡವರ ಮನೆಗೆ ನುಗ್ಗಿ ಕದ್ದ ಬೆಣ್ಣೆ ಹಿಡಿಯಲು ಮುಷ್ಟಿ ಸಾಕಾಗದ ಈ ಚೋರನಿಗೆ ಇಂದ್ರನಿಗೆ ಸೆಡ್ಡು ಹೊಡೆದು ಗೋವರ್ಧನಗಿರಿಯನ್ನೆತ್ತಿ ಹಿಡಿಯಲು ಕಿರುಬೆರಳೊಂದೇ ಸಾಕು! ಪೂತನಿಯ ಮೊಲೆಯುಂಡು ವಿಷ ಹೀರಿದ ಅದೇ ತುಟಿಗಳಿಂದ ಜೇನು ಹರಿಸಿ ಗೋಪಿಯರ ಬಾಯಿಸಿಹಿ ಮಾಡುವುದೂ ಅವನಿಗೆ ಗೊತ್ತು!

ಕೃಷ್ಣನ ಈ ಬಾಲಲೀಲೆಗಳನ್ನು ಹರಿದಾಸರು ಕಂಡ ಬಗೆ ಎಂಥದ್ದು? ಇಲ್ಲಿದೆ ಒಂದು ಝಲಕ್...

ಕೃಷ್ಣ ಬಂದಿದ್ದಾನೆ ಗೋಕುಲಕ್ಕೆ. ಯಶೋದೆಯ ಉಡಿಗೆ ಬಿದ್ದಿದ್ದಾನೆ ಆಗಲೆ. ಹೆತ್ತ ತಾಯಿಗೆ ಎತ್ತಿ ಆಡಿಸುವ ಸೌಭಾಗ್ಯವನ್ನೀಡದೆ ಅದರೆಲ್ಲ ಸುಖವನ್ನು ಬಸಿದುಬಸಿದು ಕೊಡುತ್ತಿದ್ದಾನೆ ಈ ಮಲತಾಯಿಗೆ. ಆಕೆಗೋ, ಈ ಮಹಾತುಂಟನನ್ನು ಸಂಭಾಳಿಸುವುದರಲ್ಲೇ ದಿನವೆಲ್ಲ ಖರ್ಚಾಗಿ ಹೋಗುತ್ತಿದೆ. ಪಾಪ, ದೇವರನ್ನೇ ಎತ್ತಿಆಡುಸುತ್ತಿದ್ದೇನೆಂಬುದರ ಸಣ್ಣ ಸುಳಿವೂ ಇಲ್ಲದೆ ತಾಯಿಯ ಪಾಲಿನ ಕರ್ತವ್ಯವನ್ನು ನಿಷ್ಕಳಂಕವಾಗಿ ಮಾಡುತ್ತಿದ್ದಾಳೆ ಆ ಮುಗ್ಧೆ. ಎಂಥ ಪುಣ್ಯಾತಗಿತ್ತಿಯಪ್ಪ ಇವಳು ಎಂದು ಇತತರಿಗೆ ಅಸೂಯೆ ಒಳಗೊಳಗೇ.
ಮುಖಸಾರ ಭೋಕ್ತನಿಗೆ ಮೊಲೆಹಾಲವನುಣಿಸಿ
ಅಕಳಂಕ ಮೂರುತಿಯ ಸಲೆ ಮಜ್ಜನಗೈಸಿ
ಪ್ರಕಟದಿ ಶೇಷಶಾಯಿಗೆ ತೊಟ್ಟಿಲದಿ ಮಲಗಿಸಿ
ಸುಖಯೋಗ ನಿದ್ರೆವುಳ್ಳಂಗೆ ಮಲಗೆಂದು ಜೋಜೋ ಎಂಬಳಾಕೆ

ಮೂರುಲೋಕದ ಒಡೆಯ ಎಳಸು ಕೈಕಾಲಾಡಿಸುತ್ತ ಅಸಹಾಯ ಕಂದಮ್ಮನಂತೆ ತೊಟ್ಟಿಲಲ್ಲಿ ಮಲಗಿ ಪಿಳಿಪಿಳಿ ಕಣ್ಣುಬಿಡುತ್ತಾನೆ. ಅಂಥ ಜಗನ್ನಿಯಾಮ, ಜಗದುದ್ಧಾರನನ್ನು ಮಗನೆಂದು ತಿಳಿಯುತ್ತ ಆಡಿಸುತ್ತಾಳೆ ಯಶೋದೆ.
ದೇವರಾದರೇನು ಮಗು ಅಳದೆ ಕೂತೀತೇ? ಶಿಶುರೂಪಿನಲಿರುವ ಶ್ರೀಪತಿಯನ್ನು ತೊಟ್ಟಿಲಿಗೆ ಹಾಕಿ ಗೋಪಿ ಯಶೋದೆ ಏನು ಮಾಡಿದಳು ಗೊತ್ತೆ?
ಎನ್ನಯ ರನ್ನನೆ ಸುಮ್ಮನಿರೋ ದೊಡ್ಡ
ಗುಮ್ಮನು ಬರುವನು ಅಳಬೇಡ
ಸುಮ್ಮನೆ ಇರು ನಿನಗಮ್ಮಿ ಕೊಡುವೆನೆಂದು
ಬೊಮ್ಮನ ಪಿತನ ತಾ ತೂಗಿದಳು

ಬೊಮ್ಮನ ಪಿತನಾದರೂ ಗುಮ್ಮನಿಗೆ ಹೆದರುವ ಶಿಶು ಅವನು. ಮಾತು ಕಲಿತ ಮೇಲೆ ಅನ್ನುತ್ತಾನೆ...
ಗುಮ್ಮನ ಕರೆಯದಿರೆ ಅಮ್ಮ ನೀನು
ಸುಮ್ಮನೆ ಇದ್ದೇನು ಅಮ್ಮಿಯ ಬೇಡೆನು
ಮಮ್ಮು ಉಣ್ಣುತೇನೆ ಅಮ್ಮ ಅಳುವುದಿಲ್ಲ

ಇಷ್ಟೇ ಆಗಿದ್ದರೆ ಯಶೋದೆಗೂ ಕೆಲಸ ಸುಲಭವಾಗುತ್ತಿತ್ತೇನೋ. ಆದರೆ, ನಡೆಯಲು ಕಲಿತ ಮೇಲೆ ಆ ತುಂಟನ ಚೇಷ್ಟೆಗಳು ನೂರ್ಮಡಿಯಾದವು. ಇಡೀ ಗೋಕುಲವೆಲ್ಲ ಓಡಾಡಿಕೊಂಡು ಮಾಡುವ ಭಾನಗಡಿಗಳು ಅವಳಿಗೆ ಬೆಟ್ಟದಷ್ಟು ಚಿಂತೆ ತಂದುಹಾಕಿವೆ. ಅವನ್ನೆಲ್ಲ ಆಕೆ ಒಂದೊಂದಾಗಿ ಬಿಡಿಸಿಹೇಳಿ ನೋಡಯ್ಯ ಸುಕುಮಾರ, ಹೀಗೇ ಅತಿರೇಕದ ತುಂಟಾಟ ಮಾಡುತ್ತಿದ್ದರೆ ಗುಮ್ಮನ ಕರೆದೇಬಿಡುತ್ತೇನೆಂದು ಹೆದರಿಸುತ್ತಾಳೆ. ಬೆದರಿದ ಹುಡುಗ ಹೇಳುತ್ತಾನೆ...
ಹೆಣ್ಣುಗಳಿರುವಲ್ಲಿ ಪೋಗಿ ಅವರ
ಕಣ್ಣುಮುಚ್ಚುವುದಿಲ್ಲವೆ
ಚಿಣ್ಣರ ಬಡಿಯೆನು ಅಣ್ಣನ ಬೈಯೆನು
ಬೆಣ್ಣೆಯ ಬೇಡೆನು ಮಣ್ಣು ತಿನ್ನುವುದಿಲ್ಲ
ಬಾವಿಗೆ ಪೋಗೆ ಕಾಣೆ ಅಮ್ಮ ನಾನು
ಹಾವಿನೊಳಾಡೆ ಕಾಣೆ
ಆವಿನ ಮೊಲೆಯೂಡೆ ಕರುಗಳ ಬಿಡೆ ನೋಡೆ
ದೇವರಂತೆ ಬಂದು ಠಾವಿಲಿ ಕೂಡುವೆ


ಅದನ್ನೆಲ್ಲ ಮಾಡೋದಿಲ್ಲ ಕಣೆ, ದೇವರಂತೆ ಬಂದು ನಿನ್ನೆದುರು ಕೂರುತ್ತೇನೆ ಎನ್ನುತ್ತಾನೆ ಪರಮಾತ್ಮ! ಹಾಗೆಂದು ಆತ ಮನೆಯಲ್ಲೇ ಇದ್ದರೂ ಸಮಸ್ಯೆಯೇ. ಗುಣನಿಧಿಯೆ, ನಿನ್ನನ್ನೆತ್ತಿಕೊಂಡಿದ್ದರೆ ಮನೆಯ ಕೆಲಸವಾರು ಮಾಡುವರಯ್ಯ ಎನ್ನಬೇಕಾಗುತ್ತದೆ ಆಕೆ. ಕೃಷ್ಣ ಗೋಕುಲದ ಮಗ. ಅವನನ್ನು ಕಂಡರೆ ಹುಡುಗರಿಗೆ ಮೆಚ್ಚು  ಗೋಪಿಯರಿಗೆ ಹುಚ್ಚು. ಅವರ ಗಂಡಂದಿರಿಗೆ ತಮ್ಮನ್ನು ಬಿಟ್ಟು ಆ ಮಗುವಿನ ಜೊತೆ ಇಡೀದಿನ ಕಳೆಯುತ್ತಾರಲ್ಲ ಈ ಹುಡುಗಿಯರು ಎಂದು ಕಿಚ್ಚು.

ನಂದಗೋಕುಲದಲ್ಲಿ ಇಷ್ಟೆಲ್ಲ ಸಂಭ್ರಮ ನಡೆಯುತ್ತಿರುವಾಗ ಅತ್ತ ವಸುದೇವ ದೇವಕಿಯರಿಂದ ಮೋಸ ನಡೆದಿದೆ ಎಂದು ಕಂಸನಿಗೆ ತಿಳಿದುಹೋಯಿತು. ಅವರ ಎಂಟನೇ ಮಗನಿಂದಲೇ ತನ್ನ ಮರಣ ಎಂದು ಕಂಡುಕೊಂಡ ಕಂಸ ಅವರನ್ನು ಸೆರೆಗೆ ತಳ್ಳಿ ಕಾವಲು ಕಾದರೂ ಎಲ್ಲ ವ್ಯರ್ಥವಾಯಿತಲ್ಲ ಎಂದು ಬಗೆದ. ಗೋಕುಲದಲ್ಲಿ ನಿಶ್ಚಿಂತೆಯಿಂದ ಬೆಳೆಯುತ್ತಿರುವ ಮಗುವನ್ನು ಚಿಗುರಲ್ಲೇ ಹೊಸಕಿಹಾಕಲು ಪೂತನಿಯನ್ನು ಕಳಿಸಿದ. ಆಕೆ ಗೊಲ್ಲತಿಯ ವೇಷದಲ್ಲಿ ಬಂದು ಕಪಟನಾಟಕವಾಡಿ ಕೃಷ್ಣನನ್ನೆತ್ತಿ ಹಾಲುಕುಡಿಸಲು ಶುರುಮಾಡಿದ್ದೇ ತಡ, ಆಕೆಯ ಮನಸಿನಲ್ಲಿದ್ದ ಹಾಲಾಹಲವನ್ನರಿತು ಅವಳ ಜಂಘಾಬಲವನ್ನೇ ಹೀರತೊಡಗಿತು ಹಾಲುಹಲ್ಲಿನ ಹಸುಳೆ. ಪೂತನಿಯ ಸಂಹಾರವಾದ ಮೇಲೆ ಕಂಗೆಟ್ಟ ಕಂಸ ಒಬ್ಬನ ಹಿಂದೊಬ್ಬನಂತೆ ಅಸುರರ ಸೈನ್ಯವನ್ನೇ ಗೋಕುಲಕ್ಕೆ ಕಳಿಸಿದ. ಗಾಳಿಯ ರೂಪದಲ್ಲಿ ಬಂದ ತೃಣಾವರ್ತಕ ಬಿರುಗಾಳಿಯಾಗಿ ಕೃಷ್ಣನನ್ನು ಮೇಲೆತ್ತಿಕೊಂಡೊಯ್ದಾಗ ಗರಿಮಾಶಕ್ತಿಯಿಂದ ತೂಕ ಹೆಚ್ಚಿಸಿಕೊಂಡು ಹೊತ್ತ ರಕ್ಕಸನನ್ನೇ ಕೆಳಹಾಕಿ ಕೆಡವಿದ ಕೃಷ್ಣ. ಎತ್ತಿನ ರೂಪದಲ್ಲಿ ಬಂದ ಅರಿಸ್ಟಾಸುರ, ಬಂಡಿಯ ಬಗೆಯಲ್ಲಿ ಬಂದ ಶಕಟಾಸುರ, ಕುದುರೆಯಂತೆ ಕೆನೆಯುತ್ತ ಬಂದ ಕೇಶಿ, ಘಟಸರ್ಪವಾಗಿ ಕಚ್ಚಲು ಬಂದ ಅಘಾಸುರ, ಗೊಲ್ಲನಂತೆ ವೇಷಮರೆಸಿ ಬಂದ ಪ್ರಲಂಭಾಸುರ, ಬಕಪಕ್ಷಿಯ ಬಣ್ಣದಲ್ಲಿ ಬಂದ ಬಕಾಸುರ, ಕತ್ತೆಯ ಮುಖಹೊತ್ತು ತಿವಿಯಲು ಬಂದ ಧೇನುಕಾಸುರ- ಇವರೆಲ್ಲರೂ ಕೃಷ್ಣಬಲರಾಮರ ಸಮಯಸ್ಫೂರ್ತಿ ಮತ್ತು ಬಲಾಢ್ಯತೆಗಳಿಂದ ಹೇಳಹೆಸರಿಲ್ಲದಂತೆ ಅಳಿದುಹೋದರು.
ಹೊರಗೆ ಇಷ್ಟೆಲ್ಲ ಪರಾಕ್ರಮ ತೋರಿಸುವ ಕಂದ ಮನೆಯಲ್ಲಿ ಯಶೋದೆಗೆ ಮಾತ್ರ ಇನ್ನೂ ಚಿಕ್ಕಮಗುವೇ. ಕಣ್ಣೆವೆಯಿಂದ ಆಚೆ ಒಂದರೆಗಳಿಗೆ ಹೋದರೂ ಆಕೆಗೆ ಎಲ್ಲಿಲ್ಲದ ಚಿಂತೆ. ಲೋಕಕಂಟಕ ಅಸುರರನ್ನು ಕೆಡವಿ ಮೈಗೆ ಮೆತ್ತಿದ ಮಣ್ಣನ್ನು ಕೊಡವಿಕೊಂಡು ಮನೆಗೆ ಬರುವ ಈ ಪುಟ್ಟಬಾಲಕನ ನಿಜರೂಪವರಿಯದ ಯಶೋದೆ ಕೇಳುತ್ತಾಳೆ...

ಎಲ್ಲಾಡಿ ಬಂದ್ಯೋ ಎನ್ನ ರಂಗಯ್ಯ ನೀ
ಎಲ್ಲಾಡಿ ಬಂದ್ಯೋ ಎನ್ನ ಕಣ್ಣಮುಂದಾಡದೆ
ಅಷ್ಟದಿಕ್ಕಲಿ ಅರಸಿ ಕಾಣದೆ ಬಹಳ
ದೃಷ್ಟಿಗೆಟ್ಟೆನು ನಿನ್ನ ನೋಡದೆ
ಇನ್ನೆಷ್ಟು ಹೇಳಲಿ ಕೇಳಬಾರದೆ ರಂಗ
ವಿಠಲ ನೀ ಎನ್ನ ಕಣ್ಣಮುಂದಾಡದೆ

ತುಡುಗುಕೃಷ್ಣನ ತುಂಟಾಟಕ್ಕೆ ಸುಸ್ತಾದ ಗೋಪಿಯರು ಇನ್ನು ತಾಳೆವಪ್ಪ ಎಂದು ಯಶೋದೆಯಲ್ಲಿ ದೂರು ಹೇಳಲು ಬಂದರು. ನೀರಿಗೆ ಹೋದಾಗ ಹಿಂದಿನಿಂದ ಕಲ್ಲುಬೀಸಿ ಗಡಿಗೆ ಒಡೆದ ಎಂದು ಒಬ್ಬಳೆಂದರೆ, ತುಪ್ಪ ಕಾಸೋಣ ಎಂದು ಎತ್ತಿಟ್ಟ ದೊಡ್ಡಬೆಣ್ಣೆಯ ಮುದ್ದೆಯನ್ನೇ ಎಗರಿಸಿಬಿಟ್ಟನಲ್ಲೇ ಈ ಪೋರ ಎಂದು ಇನ್ನೊಬ್ಬಾಕೆ ದೂರಿದಳು.
ನೋಡುನೋಡು ಗೋಪಿ ನಿನ್ನ ಮಗನ ಲೂಟಿಯ
ಮಾಡುತಾನೆ ಮನೆಗೆ ಬಂದು ಬಹಳ ಚೇಷ್ಟೆಯ
ಪಿಡಿದ ಸೆರಗ ಬಿಡನು ಇನ್ನೇನ ಮಾಡಲಿ
ತಡೆಯಲಾರೆನಮ್ಮ ಕೇಳೆ ಇವನ ಹಾವಳಿ

- ಎಂದು ಮತ್ತೊಬ್ಬಳ ದುಮ್ಮಾನ.
ದಿನಬೆಳಗೆದ್ದರೆ ಹೀಗೆ ಕಂಪ್ಲೇಂಟ್ ಹಿಡಿದು ಬರುವವರಿಗೆ ಸಮಾಧಾನ ಹೇಳಿ ಸಾಕಾಯಿತು ಆ ಮಹಾತಾಯಿಗೆ.
ಏಕೆ ದೂರುವಿರೇ ರಂಗಯ್ಯನ
ಏಕೆ ದೂರುವಿರೇ?
ಕೆನೆಹಾಲು ಬೆಣ್ಣೆಯನು ಇತ್ತರೆ ಆ
ದಿನಮೊಲ್ಲನು ಊಟವ!
ಮನೆಮನೆಮನೆಗಳನು ಪೊಕ್ಕು
ಬೆಣ್ಣೆ ಪಾಲ್ಮೊಸರನ್ನು ತಿನ್ನುವ
ವನಿತೆಯರ ಕೂಡಾಡಿದನೆಂ
ದೆನಲು ನಿಮಗೆ ನಾಚಿಕೆಯಿಲ್ಲವೆ?

ಎಂದು ಒಂದು ದಿನ ಗದರಿಸಿಯೇ ಬಿಟ್ಟಳವಳು. ಕುದಿವ ಸಾರಿಗೆ ಒಗ್ಗರಣೆ ಅದ್ದಿದ ಹಾಗೆ ಕಳ್ಳ ಮಗನೂ ಕೂಡ ಅವಳ ಮಾತಿಗೆ ದನಿಸೇರಿಸುತ್ತಾನೆ.
ಹರವಿಯ ಹಾಲು ಕುಡಿಯಲು ಎನ್ನ ಹೊಟ್ಟೆ
ಕೆರೆಯೇನೆ ಹೇಳಮ್ಮಯ್ಯ
ಕರೆದು ಅಣ್ಣನ ಕೇಳಮ್ಮ ಉಂಟಾದರೆ
ಒರಳಿಗೆ ಕಟ್ಟಮ್ಮಯ್ಯ

- ಎನ್ನುತ್ತಾನೆ.

ಒಂದು ದಿನ ಮದಿರಾಕ್ಷಿ ಎಂಬ ಗೋಪಿ ಮೊಸರು ಕಡೆಯುತ್ತಿದ್ದಾಗ ಹಿಂದಿನಿಂದ ಕಳ್ಳಹೆಜ್ಜೆಯಿಟ್ಟು ಬಂದ ಕೃಷ್ಣ. ಅವನಿನ್ನೇನು ಮೊಸರ ಗಡಿಗೆಗೆ ಕೈಹಾಕಿ ನವನೀತದ ಉಂಡೆಯನ್ನು ಎತ್ತಿಕೊಳ್ಳಬೇಕೆನ್ನುವಷ್ಟರಲ್ಲಿ ಆಕೆ ಆತನ ಕೈಹಿಡಿದೇಬಿಟ್ಟಳು. ಕಡೆಗೋಲಿಗೆ ಕಟ್ಟಿದ ಹಗ್ಗದಿಂದ ಅವನನ್ನು ಮೊಸರು ಕಡೆಯುವ ಗೂಟಕ್ಕೆ ಕಟ್ಟಿಹಾಕಿ, 'ಏನಯ್ಯ ಕಳ್ಳಕೃಷ್ಣ ಮನೆಬಿಟ್ಟು ಎಲ್ಲೂ ಹೋಗೋದೇ ಇಲ್ಲ ನನ್ನ ಮಗ ಎಂದು ನಿನ್ನಮ್ಮ ನಿನ್ನಪರ ವಕಾಲತ್ತು ವಹಿಸಿ ದೂರು ತಂದವರನ್ನೆಲ್ಲ ಬಯ್ದು ಅಟ್ಟುತ್ತಾಳೆ. ಈಗವಳಿಗೆ ಹೋಗಿ ತೋರಿಸುತ್ತೇನೆ ನಿನ್ನ ಪ್ರತಾಪ' ಎಂದು ಹೇಳಿ ಯಶೋದೆಯ ಮನೆಗೆ ಓಡಿದಳು. ಅವಳಿನ್ನೇನು ನಂದನ ಮನೆ ತಲುಪಬೇಕೆನ್ನುವಷ್ಟರಲ್ಲಿ ಅಂಗಳದಲ್ಲಿ ಆಡಿಕೊಳ್ಳುತ್ತಿರುವ ಕೃಷ್ಣ, 'ಏನಮ್ಮ ಮದಿರಾಕ್ಷಿ ಎಲ್ಲ ಕ್ಷೇಮವೇ ಬಾ ಬಾ' ಎಂದು ಹುಸಿನಗುತ್ತ ಆಮಂತ್ರಿಸಿದ! ಈ ಮಾಯೆಯಿಂದ ಆಕೆ ಅಚ್ಚರಿಗೊಂಡು ಥಟ್ಟನೆ ತಿರುಗಿ ಮನೆಗೋಡಿ ನೋಡಿದರೆ, ಅಲ್ಲಿ ಕಂಬಕ್ಕೆ ಕಟ್ಟಿದ ಕೃಷ್ಣ ಜೋಲುಮುಖ ಮಾಡಿ ಹಾಗೆಯೇ ನಿಂತಿದ್ದಾನೆ! ಮತ್ತೆ ಯಶೋದೆಯ ಮನೆಗೆ ಬಂದರೆ, ಅಲ್ಲಿ ಕೃಷ್ಣ ಕಣ್ಣಂಚಲ್ಲಿ ನಗುತ್ತ ಆಟವಾಡಿಕೊಂಡಿದ್ದಾನೆ!
ಎಷ್ಟು ದುಷ್ಟನೆ ಯಶೋದೆ ನಿನ್ನ ಮಗ?
ಅಷ್ಟು ಹೇಳುವೆನು ಕೇಳೆ
ಸೃಷ್ಟಿಯೊಳಗೆ ಇಂಥ ಚೇಷ್ಟೆಕೋರನ ಕಾಣೆ
ಹುಟ್ಟಿಸಿದಾ ಬ್ರಹ್ಮ ಗಟ್ಟಿ ಕಾಣಮ್ಮ

ಎಂದು ದೂರುಹೇಳುವಾಗಲೂ ಅವನ ಚೇಷ್ಟೆಯನ್ನು ಮೆಚ್ಚುತ್ತ ಬಯ್ದುಕೊಳ್ಳುವ ಗೋಪಿಯರ ಸಂಗಡ ಮದಿರಾಕ್ಷಿಯೂ ದನಿಗೂಡಿಸಿದಳು!
ಕೃಷ್ಣನನ್ನು ಹೊರಡಿಸುವುದೇ ಒಂದು ಹಬ್ಬದಷ್ಟು ದೊಡ್ಡ ಆಚರಣೆ. ಕಾಲಂದುಗೆ, ಗೆಜ್ಜೆ, ನೀಲದ ಬಾವುಲಿ, ಉಡಿಯಲ್ಲಿ ಉಡಿಗೆಜ್ಜೆ, ಬೆರಳಲ್ಲಿ ಉಂಗುರ, ಕೊರಳಲ್ಲಿ ವೈಜಯಂತಿ ಮಾಲೆ, ತುಳಸಿಹಾರ, ಕಾಶಿಪೀತಾಂಬರ, ಕೈಯಲ್ಲಿ ಕೊಳಲು, ಪೂಸಿದ ಶ್ರೀಗಂಧ, ಕುಂಕುಮ, ಕಸ್ತೂರಿ, ಎದೆಯಲ್ಲಿ ಕೌಸ್ತುಭ, ನೊಸಲ ಸುತ್ತಿದ ಪಟ್ಟಿ, ನಡುವಿಗೆ ಒಡ್ಯಾಣ... ಒಂದೇ ಎರಡೇ? ಇವನ್ನೆಲ್ಲ ಉಡಲುತೊಡಲು ಹಠ ಮಾಡಿದರೆ ಕೋಪದಿಂದ ಯಶೋದೆ ಜೋಗಿಯನ್ನು ಕರೆಯುತ್ತಾಳೆ.

ಇವನ ಹಿಡಿದುಕೊಂಡು ಹೋಗೆಲೋ ಜೋಗಿ
ಇವ ನಮ್ಮ ಮಾತ ಕೇಳದೆ ಪುಂಡನಾದ
ಆಡುತಾಡುತ ಹೋಗಿ ನೀರೊಳು ಮುಳುಗಿದ
ಬೇಡವೆಂದರೆ ಬೆಟ್ಟ ಬೆನ್ನಲಿ ಹೊತ್ತ
ದಾಡೆಯ ಮೇಲೆ ತಾ ಧಾರಿಣಿ ನೆಗಹಿದ
ಹಿಡಿಯಹೋದರೆ ಬಾಯ ತೆರೆದು ಅಂಜಿಸಿದ!

ಎಂದು ಕೃಷ್ಣನನ್ನು ಕೋಪ, ಭಯ, ಆಶ್ಚರ್ಯ, ಕೌತುಕ, ಅಸಹ್ಯಗಳಿಂದ ಮೆಚ್ಚುತ್ತ, ತುಸು ಬೆಚ್ಚುತ್ತ ನೋಡುತ್ತಾಳೆ. ಬೆದರಿಕೆಗೆ ಭಯಬಿದ್ದು ಮಗುವೇನಾದರೂ ಅತ್ತರೆ ಯಶೋದೆಯ ಕಲ್ಲುಸಕ್ಕರೆಯಂಥ ಹೃದಯ ಒಂದೇಕ್ಷಣದಲ್ಲಿ ನೀರಾಗಿ ಹರಿಯತೊಡಗುತ್ತದೆ! ಕೂಡಲೇ ಅಳುವ ಕಂದಮ್ಮನನ್ನು ಎತ್ತಿ ಮುದ್ದಾಡುತ್ತ...
ಅಳುವುದ್ಯಾತಕೋ ರಂಗ, ಅತ್ತರಂಜಿಪ ಗುಮ್ಮ!
ಪೂತನಿಯ ಮೊಲೆಯುಂಡು ದೃಷ್ಟಿ ತಾಕಿತೆ?
ಕಾಳಿಂದಿ ಮಡುವಲ್ಲಿ ಕಾಲು ಉಳುಕಿತೆ?
ಬೆಟ್ಟ ಎತ್ತಿ ಬೆರಳು ಉಳುಕಿತೆ?

ಎಂದು ಸೌಜನ್ಯಾತಿಶಯದಿಂದ ವಿಚಾರಿಸತೊಡಗುತ್ತಾಳೆ! ಅವಳ ಅಶ್ರುಧಾರೆಯನ್ನು ಕಂಡರೆ ಮಗು ಗೋಪಾಲನಿಗೂ ಬೇಸರ. ಕೂಡಲೇ ಆಕೆಯ ಕೈಯಿಂದ ಒಂದೊಂದಾಗಿ ಬಟ್ಟೆಬರೆ ಎತ್ತಿಹಾಕಿಸಿಕೊಂಡು ಅವಳ ಕಣ್ಣೊರೆಸಿ ಹೇಳುತ್ತಾನೆ ಈ ಕಿಶೋರ:
ಅಂಗಿ ತೊಟ್ಟೇನೆ ಗೋಪಿ ಶೃಂಗಾರವಾದೇನೆ
ಹಾಲ ಕುಡಿದೇನೆ ಗೋಪಿ ಆಕಳ ಕಾಯ್ದೇನೆ

ಅಷ್ಟೆಲ್ಲ ಆಗಿ ಅಲಂಕಾರ ಮುಗಿವ ಹೊತ್ತಿಗೆ ವಯೋಸಹಜವಾಗಿ ಮುಕುಂದನ ಹೊಟ್ಟೆ ತಾಳಹಾಕತೊಡಗುತ್ತದೆ. ಚಕ್ಕುಲಿ ಕೊಡು ಉಂಡೆ ಕೊಡು ಎಂದು ಕಾಡತೊಡಗುತ್ತಾನೆ. ಅಮ್ಮಣ್ಣಿ ಕೊಟ್ಟರೆ ಸಾಕೆ, ಅದರ ಮೇಲೆ ಬೆಣ್ಣೆ ಲೇಪಿಸಬೇಕು! ಅಪ್ಪಚ್ಚಿ ಕೊಟ್ಟರೆ ಸಾಕೆ, ಅದಕ್ಕೆ ತುಪ್ಪ ಸುರಿಯಬೇಕು! ಸಕಲ ಅಲಂಕಾರಭೂಷಿತನಾಗಿ ಕೈಯಲ್ಲಿ ಕೊಳಲು ಹಿಡಿಯಲು ಜಾಗವಿಲ್ಲದೆ ಉಂಡೆಚಕ್ಕುಲಿ ಬೆಣ್ಣೆಮೊಸರನ್ನೆಲ್ಲ ಇರುಕಿಸಿಕೊಂಡು ಒದ್ದಾಡುವ ತುಂಟನ್ನ ಕಂಡರೆ ಯಶೋದೆಗೆ ನಗು. ಬಾರೋ ಗುಮ್ಮ, ಇವನನ್ನೆತ್ತಿಕೊಂಡು ಹೋಗು ಎಂದವಳೇ ಈಗ, 'ಪೋಗದಿರೆಲೋ ರಂಗ ಬಾಗಿಲಿಂದಾಚೆಗೆ, ಭಾಗವತರು ಕಂಡರೆತ್ತಿ ಕೊಂಡೊಯ್ವರೊ' ಎನ್ನುತ್ತಾಳೆ.

ಇಂತಿಪ್ಪ ತುಂಟಕೃಷ್ಣ ಬೆಳೆದ. ದೊಡ್ಡವನಾದ. ತನ್ನ ಗಾನದಿಂದ ಪಶುಪಕ್ಷಿಗಳನ್ನು ಮಂತ್ರಮುಗ್ಧಗೊಳಿಸುತ್ತಿದ್ದವನು ಈಗ ಊರ ಹುಡುಗಿಯರ ಕನಸಿನ ಕಣ್ಮಣಿಯಾದ. ವೃಂದಾವನದಲ್ಲಿ ಜೊತೆಕೂತ ರಾಧೆಗೆ ಮಧುರಾನುಭೂತಿ ಕಾಣಿಸಿದ. ನಂದನರಮನೆಗೆ ದೂರು ಕೊಡಲು ಓಡೋಡಿ ಬರುತ್ತಿದ್ದವರ ಬಾಯಿಮುಚ್ಚಿಸಿ ಬಿಟ್ಟ! ತನ್ನ ತುಟಿಗಳಿಂದ ಶೃಂಗಾರದಲ್ಲಿ ಲಜ್ಜೆ ನಟಿಸುವ ಗೋಪಿಯೊಬ್ಬಳು ತುಡುಗುಗೋವಿನಂತೆ ಕೃಷ್ಣ ಬಳಿಸರಿದಾಗ ಬೇಡಿಕೊಳ್ಳುತ್ತಾಳೆ;
ಸದ್ದು ಮಾಡಲು ಬ್ಯಾಡವೋ ನಿನ ಕಾಲಿಗೆ
ಬಿದ್ದು ನಾ ಬೇಡಿಕೊಂಬೆ
ನಿದ್ದೆಗೆಯ್ಯುವರೆಲ್ಲ ಎದ್ದರೆ ನೀನು ಬಂ
ದಿದ್ದದ್ದು ಕಂಡರೇನೆಂಬುವರೊ ರಂಗ
ಬಳೆ ಘಲುಕೆನ್ನದೇನೋ ಕೈಯ ಪಿಡಿದು
ಎಳೆಯದಿರೊ ಸುಮ್ಮನೆ
ಮೊಲೆಗಳ ಮೇಲಿನ ಸೆರಗನೆಳೆಯಲು ಕೊ
ರಳ ಪದಕಂಗಳು ದ್ವನಿಗೆಯ್ಯುವಮೊ ರಂಗ
ನಿರುಗೆಯ ಪಿಡಿಯದಿರೊ ಕಾಂಚಿಯ ದಾಮ
ಕಿರುಗಂಟೆ ಧ್ವನಿಗೆಯ್ಯದೆ
ಕಿರುದುಟಿಗಳ ನೀನು ಸವಿದು ಚಪ್ಪರಿಸಲು
ತರವಲ್ಲ ಗಂಡ ಮತ್ಸರವ ತಾಳುವನಲ್ಲ

ಆದರೆ, ಕೃಷ್ಣನವತಾರದ ಉದ್ದೇಶವಿದ್ದುದೇ ಬೇರೆ. ಅದಕ್ಕೂ ಕಾಲ ಸನ್ನಿಹಿತವಾಗುತ್ತಿತ್ತು. ಗೋಕುಲದಲ್ಲಿ ಗೊಲ್ಲ- ಗೊಲ್ಲತಿಯರ ಜೊತೆ ಆಡುಪಾಡುತ್ತ ಸ್ವಚ್ಛಂದವಾಗಿ ದಿನಗಳೆಯುತ್ತಿದ್ದ ಕೃಷ್ಣನಿಗೆ ಕರ್ತವ್ಯದ ಕರೆಗೆ ಓಗೊಡುವ ಸಮಯ ಸಮೀಪಿಸುತ್ತಿತ್ತು. ಇಷ್ಟುದಿನ ಸಲಹಿದ ಯಶೋದೆಯಂಥ ಅಮ್ಮನನ್ನು, ಕರೆಕರೆದು ಬಾಯ್ತುಂಬ ಬೆಣ್ಣೆ ತಿನ್ನಿಸಿದ ಗೋಪಿಯರನ್ನು, ಚಿಣ್ಣಿದಾಂಡು ಆಡಿದ ಗೆಳೆಯರನ್ನು, ತಮ್ಮನ್ನೇ ಸಮರ್ಪಿಸಿಕೊಂಡು ಲಾಲಿಸಿದ ಹುಡುಗಿಯರನ್ನು ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಜೀವದ ಗೆಳತಿ ರಾಧೆಯನ್ನು ಬೀಳ್ಕೊಂಡು ತನ್ನ ಮುಂದಿನ ಕೆಲಸಕ್ಕಾಗಿ ಹೊರಡುವ ಕಾಲ ಹತ್ತಿರವಾಗುತ್ತಿತ್ತು. ಕೊನೆಗೂ ಆ ದಿನ ಬಂದೇಬಂತು. ಅಕ್ರೂರ ಬಂದು ಕೃಷ್ಣನನ್ನು ಮುಂದಿನ ಕೆಲಸಕ್ಕಾಗಿ ಸಿದ್ಧಪಡಿಸಿ ಹೊರಡಿಸಿದ. ಕೃಷ್ಣ ಮಥುರಾಪುರಕ್ಕೆ ಹೊರಟು ನಿಂತ ಸುದ್ದಿ ಕಾಳ್ಗಿಚ್ಚಿನಂತೆ ಗೋಕುಲವಿಡೀ ಹರಡಿತು. ನೀನು ಹೋಗುವುದೇ ಆದರೆ ನಮ್ಮ ಎದೆಗಳ ಮೇಲೆ ರಥಹರಿಸಿಕೊಂಡು ಹೋಗು ಎಂದು ಗೋಪಜನಗಣ ಅತ್ತು ಕಣ್ಣೀರುಗರೆದು ಅಂಗಲಾಚುತ್ತ ಬೇಡುತ್ತ ಹೇಳಿತು. ಕೃಷ್ಣನಿಲ್ಲದ ಗೋಕುಲಕ್ಕೆ ಅಸ್ತಿತ್ವವೇ ಇಲ್ಲ ಎಂದು ಗೋಪಿಕೆಯರು ಬಾಯಿಗೆ ಸೆರಗೊತ್ತಿಕೊಂಡು ಮೌನವಾಗಿ ಗೋಳಾಡಿದರು.

ಸಂತೈಸಿಹೋದ ಕೃಷ್ಣನ ಮೆಲ್ಲುಸಿರನ್ನೇ ತೀವ್ರವಾಗಿ ಧೇನಿಸುತ್ತ ಕಲ್ಲಿನಂತೆ ಕುಸಿದಿರುವ ರಾಧೆ ಬಿಟ್ಟಕಣ್ಣುಬಿಟ್ಟಂತೆ ಕೂತಿದ್ದಾಳೆ. ಏರಿಳಿವ ಎದೆಯ ಭಾರವನ್ನು ಒತ್ತಿಹೊರಹಾಕುವಂತೆ ಇಳಿಯುತ್ತಿರುವ ತುಂಬುಕಣ್ಣೀರು ಸುಳಿಯುವ ಗಾಳಿಯೊಡನೆ ಮಾತಾಡುತ್ತ ಹೇಳುತ್ತಿದೆ;
ಮಂದಾನಿಲನ ಸಹಿಸಲಾಗದು
ನೊಂದೆ ಶುಕಪಿಕ ರವಗಳಿಂದ
ಚಂದ್ರಕಿರಣದಿ ಬೆಂದೆ ಇನ್ನೀ
ವೃಂದಾವನವೇಕವನನಗಲಿ


- ರೋಹಿತ್ ಚಕ್ರತೀರ್ಥ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಯುದ್ಧದ ಕುರಿತು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಜೊತೆ ಮೋದಿ ಮಹತ್ವದ ಮಾತುಕತೆ

ಗುಜರಾತ್: ರಾಹುಲ್ ಗಾಂಧಿ ಪರ ವಕಾಲತ್ತು ವಹಿಸಿದ್ದ ವಕೀಲ ಫಿರೋಜ್ ಪಠಾಣ್ ಮೃತದೇಹ ತಾಪಿ ನದಿಯ ದಡದಲ್ಲಿ ಪತ್ತೆ!

ಭಾರತಕ್ಕೆ ಉತ್ತಮ ವಿರೋಧಪಕ್ಷಕ್ಕಾಗಿ ಅಭಿಯಾನ ಅಗತ್ಯ: ಸೀತಾರಾಮನ್

ಧರ್ಮಸ್ಥಳ ಬುರುಡೆ ರಹಸ್ಯ ಬಹಿರಂಗ: ಮುಸುಕುಧಾರಿಗೆ 'ಬುರುಡೆ' ಕೊಟ್ಟಿದ್ದು ಸೌಜನ್ಯ ಮಾವ!

ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ; ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ ಅನುಷ್ಠಾನ

SCROLL FOR NEXT