ತುಂಬಾ ಸಿಡುಕು ಸ್ವಭಾವದ ಬಾಲಕನೊಬ್ಬನಿದ್ದ. ಆತನ ತಂದೆ ಅದೊಂದು ದಿನ ಆತನಿಗೆ ಒಂದು ಚೀಲ ಉದ್ದನೆಯ ದಪ್ಪ ಮೊಳೆಗಳು ಮತ್ತು ಸುತ್ತಿಗೆಯೊಂದನ್ನು ತಂದುಕೊಟ್ಟ. ಅವರ ಮನೆಯ ಸುತ್ತ ಮರದ ಹಲಗೆಗಳಿಂದ ನಿರ್ಮಿಸಿದ್ದ ಬೇಲಿ ಇತ್ತು.
'ಮಗಾ! ನಿನಗೆ ಕೋಪ ಬಂದಾಗಲೆಲ್ಲ ಒಂದೊಂದು ಮೊಳೆಯನ್ನು ಈ ಬೇಲಿಗೆ ಹೊಡೆಯುತ್ತಾ ಇರು' ಎಂದು ಮಗನಿಗೆ ತಂದೆ ಹೇಳಿದ.
ಮೊದಲ ದಿನ ಆ ಬಾಲಕ ಮರದ ಬೇಲಿಗೆ 37 ಮೊಳೆಗಳನ್ನು ಹೊಡೆದಿದ್ದ! ಮೊಳೆಹೊಡೆಯುವ ಕಾರ್ಯ ಮುಂದುವರಿಯಿತು. ಮೂರನೆಯ ವಾರ ಆತನ ಕೋಪ ನಿಯಂತ್ರಣಕ್ಕೆ ಬರುತ್ತಿದ್ದಂತೆ ಆತ ಪ್ರತಿದಿನ ಹೊಡೆಯುತ್ತಿದ್ದ ಮೊಳೆಗಳ ಸಂಖ್ಯೆಯೂ ಕಡಿಮೆಯಾಗುತ್ತ ಬಂದವು. ಏಕೆಂದರೆ ಆ ಮರದ ಬೇಲಿಗೆ ಮೊಳೆ ಹೊಡೆಯುವುದಕ್ಕಿಂತ ಕೋಪವನ್ನು ನಿಯಂತ್ರಿಸುವುದು ಸುಲಭ ಎಂದಾತನಿಗೆ ಮನವರಿಕೆಯಾಗಿತ್ತು!
ಕೊನೆಗೂ ಆ ದಿನ ಬಂದೇಬಿಟ್ಟಿತು. ಆತ ಆ ದಿನ ಕೋಪಗೊಳ್ಳಲೇ ಇಲ್ಲ. ಹಾಗಾಗಿ ಅಂದು ಆತ ಬೇಲಿಗೆ ಮೊಳೆಯನ್ನೇ ಹೊಡೆದಿರಲಿಲ್ಲ!
'ಈಗ ನೀನು ನಿನ್ನ ಕೋಪವನ್ನು ನಿಯಂತ್ರಣದಲ್ಲಿಸಿಕೊಂಡಾಗಲೆಲ್ಲ ಒಂದೊಂದೇ ಮೊಳೆಯನ್ನು ಮರದ ಬೇಲಿಯಿಂದ ಈ ಸುತ್ತಿಗೆಯ ಸಹಾಯದಿಂದಲೇ ಕೀಳುತ್ತಿರು' ಎಂದು ತಂದೆ ಮಗನಿಗೆ ಹೇಳಿದರು. ಕೊನೆಗೊಂದು ದಿನ ಆತ ಎಲ್ಲ ಮೊಳೆಗಳನ್ನೂ ಬೇಲಿಯಿಂದ ಕಿತ್ತಿದ್ದ.
ಈಗ ಆತನ ತಂದೆ ಆತನನ್ನು ಬೇಲಿಯ ಬಳಿಗೆ ಕರೆದುಕೊಂಡು ಹೋಗಿ, 'ನೀನೀಗ ಒಳ್ಳೆಯ ಕೆಲಸವನ್ನೇ ಮಾಡಿದ್ದೀಯೆ ಮಗು. ಆದರೆ ಈಗ ಈ ಮರದ ಬೇಲಿಯನ್ನು ನೋಡು. ಮೊದಲು ಅದೆಷ್ಟು ಸುಂದರವಾಗಿತ್ತು. ಈಗ ರಂಧ್ರಗಳಿಂದ ಅದೆಷ್ಟು ಕುರೂಪವಾಗಿದೆ. ಈ ಬೇಲಿ ಮೊದಲಿದ್ದಂತೆ ಈಗ ಸುಂದರವಾಗಿರಲು ಸಾಧ್ಯವೇ? ಆದುದರಿಂದ ನೀನು ಕೋಪದಿಂದ ಆಡಿದ ಮಾತುಗಳು ಸಹ ಕೇಳುಗರ ಮನಸ್ಸಿನಲ್ಲಿ ಈ ರೀತಿ ಕುರೂಪದ ಗಾಯಗಳನ್ನು ಮಾಡುತ್ತಿರುತ್ತದೆ. ಗಾಯ ಆತನ ದೇಹದ ಮೇಲಲ್ಲದಿದ್ದರೂ ಮನಸ್ಸಿನ ಮೇಲೆ ಇದ್ದೇ ಇರುತ್ತದೆ. ಗಾಯದ ಗುರುತು ಆತನ ಮನಸ್ಸಿನ ಮೇಲೆ ಶಾಶ್ವತವಾಗಿ ಉಳಿದುಬಿಡುತ್ತದೆ. ಮಾತಿನ ಗಾಯವೂ ಸಹ ದೈಹಿಕ ಗಾಯದಷ್ಟೇ ಕೆಟ್ಟದ್ದು' ಎಂದು ಬುದ್ಧಿಮಾತು ಹೇಳಿದ.
ನೀತಿ: ಸಿಡುಕು, ರೇಗಾಟ, ಕೂಗಾಟ, ಕೋಪದಿಂದ ತಾಳ್ಮೆ ಕಳೆದುಕೊಂಡರೆ ಮನಸ್ಸಿನ ಮೇಲೆ ಮಾಯದ ಗಾಯ ಆಗುತ್ತಿರುತ್ತದೆ.
- ಎಸ್. ವಿಶ್ವನಾಥ, ಮಂಡ್ಯ