

ಕೋಲ್ಕತ್ತಾ: ಕೋಲ್ಕತ್ತಾದ ಒಂಬತ್ತು ಅಂತಸ್ತಿನ ಸರ್ಕಾರಿ ಕಟ್ಟಡದಲ್ಲಿ ಬುಧವಾರ ಬೆಳಗ್ಗೆ ಕಚೇರಿಗಳು ಆರಂಭವಾಗುವ ಮುನ್ನ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯಲ್ಲಿ ಇತ್ತೀಚಿನ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾಗಿದ್ದ ಸುಮಾರು 4,000 ಇವಿಎಂ ಸುಟ್ಟು ಭಸ್ಮವಾಗಿವೆ. ಹೀಗಾಗಿ ಅಗ್ನಿ ಅವಘಡ ಹಲವು ಅನುಮಾನಕ್ಕೆ ಕಾರಣವಾಗಿದೆ.
ದಕ್ಷಿಣ ಕೋಲ್ಕತ್ತಾದ ಅಲಿಪೋರ್ ಪ್ರದೇಶದಲ್ಲಿರುವ ಸರ್ಕಾರಿ ಕಟ್ಟಡದ ಮೂರನೇ ಮಹಡಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ನಂತರ ಅದು ಇತರ ಮಹಡಿಗಳಿಗೂ ವ್ಯಾಪಿಸಿದೆ. ಹೀಗಾಗಿ ಕಟ್ಟಡದ 8 ಮತ್ತು 9ನೇ ಮಹಡಿಗಳಲ್ಲಿ ಇರಿಸಲಾಗಿದ್ದ ಸುಮಾರು 4,000 ಇವಿಎಂಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ಪಶ್ಚಿಮ ಬಂಗಾಳದ ಸರ್ಕಾರಿ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಮಾರು 4,000 ಇವಿಎಂಗಳು ಸುಟ್ಟುಹೋಗಿವೆ ಎಂದು ಪಶ್ಚಿಮ ಬಂಗಾಳ ಸಚಿವ ಕೌಶಿಕ್ ಚೌಧರಿ ಅವರು ಗುರುವಾರ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
"ಸುಮಾರು 4,000 ಇವಿಎಂಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಈ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 10 ಕ್ಷೇತ್ರಗಳಲ್ಲಿ ಆ ಇವಿಎಂಗಳನ್ನು ಬಳಸಲಾಗಿತ್ತು" ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಚಿವರು ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಚೌಧರಿ, "ಇದು ಸಾಮಾನ್ಯ ಅಗ್ನಿ ಅವಘಡದಂತೆ ಕಾಣುತ್ತಿಲ್ಲ. ಯಾವುದೋ ವಿಧ್ವಂಸಕ ಕೃತ್ಯ ನಡೆದಿದೆಯೇ ಎಂದು ನಾವು ಪರಿಶೀಲಿಸುತ್ತಿದ್ದೇವೆ. ಒಂಬತ್ತನೇ ಮತ್ತು ಹತ್ತನೇ ಮಹಡಿಗಳಿಗೆ ಬೆಂಕಿ ಹೇಗೆ ತಲುಪಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ" ಎಂದರು.
ಕಟ್ಟಡದ ಎರಡನೇ ಮತ್ತು ಮೂರನೇ ಮಹಡಿಗಳಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತು. ಆದರೆ ನಾಲ್ಕನೇ, ಐದನೇ ಮತ್ತು ಆರನೇ ಮಹಡಿಗಳಿಗೆ ಯಾವುದೇ ತೊಂದರೆಯಾಗದಂತೆ ಅದು ಏಳನೇ ಮತ್ತು ಎಂಟನೇ ಮಹಡಿಗಳಿಗೆ ಹೇಗೆ ತಲುಪಿತು? ಇಡೀ ಘಟನೆ ತನಿಖೆಯಲ್ಲಿದೆ" ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.
Advertisement